ಮೈಸೂರು: ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಲಾಗಿದೆ. 2013ರಲ್ಲಿ ಹೆಚ್. ವಿಶ್ವನಾಥ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ, ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿ ಅವರಿಗೆ 55 ಲಕ್ಷ ರೂಪಾಯಿ ಸಾಲವಾಗಿ ನೀಡಲಾಗಿತ್ತು.
ಸಾಲ ಪಡೆದ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದರೂ, ಹಲವು ವರ್ಷಗಳಿಂದ ಹಣ ವಾಪಸ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2026ರ ಫೆಬ್ರವರಿಯಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಶ್ವನಾಥ್ ಇದ್ದ ವೇಳೆ, ಸಾಲದ ಹಣ ಕುರಿತು ಮಾತನಾಡಲು ಕೋಟೆಹುಂಡಿ ಮಹದೇವು ತೆರಳಿದ್ದರು. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕೋಟೆಹುಂಡಿ ಮಹದೇವು ಮೊದಲು ದೇವರಾಜ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಲು ಆದೇಶ ಪಡೆದಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



