ಆನೇಕಲ್: ಲವ್ ಬ್ರೇಕಪ್ ಹಿನ್ನೆಲೆ ಮನನೊಂದ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಭಾರೀ ಆತಂಕ ಸೃಷ್ಟಿಸಿದೆ.
ಸೋಮಶೇಖರ್ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಮದುವೆಗೆ ನಿರಾಕರಿಸಿ ದೂರವಾಗಲು ಮುಂದಾದ ಹಿನ್ನೆಲೆ ಆತ ಆಕ್ರೋಶಗೊಂಡಿದ್ದಾನೆ ಎನ್ನಲಾಗಿದೆ.
ಘಟನೆಯ ದಿನ ಮೊದಲು ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ರೌಡಿಸಂ ನಡೆಸಿದ ಆತ, ಬಳಿಕ ಸಮೀಪದ ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದಾನೆ. ‘ನಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರಬೇಕು, ಇಲ್ಲದಿದ್ದರೆ ಕೆಳಗೆ ಇಳಿಯಲ್ಲ’ ಎಂದು ಕಂಬದ ಮೇಲಿಂದಲೇ ಕೂಗಾಡಿದ್ದಾನೆ.
ಯುವಕನ ಈ ಕೃತ್ಯದಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ವಿದ್ಯುತ್ ಅವಘಡ ಸಂಭವಿಸುವ ಭೀತಿ ಹಿನ್ನೆಲೆ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಯಿತು. ಬಳಿಕ ಅಧಿಕಾರಿಗಳು ಮತ್ತು ಸ್ಥಳೀಯರು ಸಾಕಷ್ಟು ಮನವೊಲಿಕೆ ನಡೆಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.
ಪ್ರೇಮ ವೈಫಲ್ಯದಿಂದ ಭಾವೋದ್ವೇಗಕ್ಕೆ ಒಳಗಾದ ಯುವಕನ ಈ ಹುಚ್ಚಾಟ ಕೆಲಕಾಲ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು.



