ಹೈದರಾಬಾದ್: ಅಭಿಮಾನಿಗಳ ಮೇಲೆ ದುರ್ವರ್ತನೆ ತೋರಿದ ತಮ್ಮ ಭದ್ರತಾ ಸಿಬ್ಬಂದಿಯನ್ನು ಜೂನಿಯರ್ ಎನ್ಟಿಆರ್ ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜನ್ಮದಿನದ ಪ್ರಯುಕ್ತ ಮಂಗಳವಾರ ರಾತ್ರಿ ಜೂನಿಯರ್ ಎನ್ಟಿಆರ್ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಮಧ್ಯರಾತ್ರಿ ಮನೆಯ ಹೊರಗೆ ಬಂದ ತಾರಕ್, ಬ್ಯಾರಿಕೇಡ್ ಹಿಂದಿನಿಂದಲೇ ಅಭಿಮಾನಿಗಳಿಗೆ ಕೈಬೀಸಿ ಶುಭಾಶಯ ಸ್ವೀಕರಿಸಿದರು.
ಈ ವೇಳೆ ಕೆಲ ಅಭಿಮಾನಿಗಳು ಮುಂದೆ ಬರಲು ಯತ್ನಿಸಿದಾಗ, ಸೆಕ್ಯೂರಿಟಿ ಸಿಬ್ಬಂದಿ ಅವರನ್ನು ಬಲವಂತವಾಗಿ ಹಿಂದಕ್ಕೆ ತಳ್ಳಲು ಮತ್ತು ಗದರಿಸಲು ಆರಂಭಿಸಿದರು. ಅಭಿಮಾನಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡ ತಾರಕ್ ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.
ಮುಖ್ಯ ಭದ್ರತಾ ಸಿಬ್ಬಂದಿಯನ್ನು ಕರೆದು, ‘ನೀವೇ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದೀರಿ’ ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಟನ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ‘ತಾರಕ್ ಯಾವತ್ತೂ ಫ್ಯಾನ್ಸ್ ಪರ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಲಾಗುತ್ತಿದೆ.
ಇದೇ ವೇಳೆ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರದ ಗ್ಲಿಂಪ್ಸ್ ಕೂಡ ಬಿಡುಗಡೆಗೊಂಡಿದ್ದು, ಅದರಲ್ಲಿ ತಾರಕ್ ಅವರ ರಗಡ್ ಲುಕ್ ಸಖತ್ ವೈರಲ್ ಆಗಿದೆ. ಅಫೀಮು ದಂಧೆಯ ಹಿನ್ನೆಲೆಯ ಕಥೆ ಹೊಂದಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.



