ವಿಜಯಪುರ: ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಆಡಳಿತದ ವಿರುದ್ಧ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಅಭಿವೃದ್ಧಿಗಿಂತ ಭ್ರಷ್ಟಾಚಾರ ಮತ್ತು ಕುರ್ಚಿಗಾಗಿ ರಾಜಕಾರಣವೇ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಿಳೆಯರಿಗೆ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿ, ಅದೇ ಹಣವನ್ನು ಕುಟುಂಬದ ಗಂಡಸರ ಜೇಬಿನಿಂದ ವಸೂಲಿ ಮಾಡಲಾಗುತ್ತಿದೆ. ಸಾಮರ್ಥ್ಯ ಇದ್ದರೆ ಗ್ಯಾರಂಟಿ ಕೊಡಿ, ಇಲ್ಲದಿದ್ದರೆ ಸುಳ್ಳು ಭರವಸೆ ಬೇಡ’ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಆರೋಪಿಸಿದರು.
‘ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆ ಶೂನ್ಯ. ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಪ್ರಧಾನಿ ಮೋದಿ ಮಂಜೂರು ಮಾಡಿದ ರಸ್ತೆಗಳಿಗೆ ಇವರು ಭೂಮಿಪೂಜೆ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಇನ್ನೂ ಮೂರು ವರ್ಷಗಳಲ್ಲಿ ಸರ್ಕಾರ ಮಾಡಿರುವುದು ಅಭಿವೃದ್ಧಿಯಲ್ಲ, ಕುರ್ಚಿಗಾಗಿ ಪರಸ್ಪರ ಗುದ್ದಾಟ ಮಾತ್ರ ಎಂದು ಹೇಳಿದ ಜಿಗಜಿಣಗಿ, ಸಿಎಂ ಸಿದ್ದರಾಮಯ್ಯ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.



