ವಿಜಯಸಾಕ್ಷಿ ಸುದ್ದಿ, ಮುಳಗುಂದ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, “ಮುಳಗುಂದ ಪಟ್ಟಣವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದು, ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲಾ ಹಬ್ಬ ಹರಿದಿನಗಳನ್ನು ಪರಸ್ಪರ ಸಹಕಾರದಿಂದ ಆಚರಿಸುತ್ತಿದ್ದಾರೆ” ಎಂದು ಹೇಳಿದರು.
“ಗೋವುಗಳ ಹತ್ಯೆ ಅಥವಾ ಅಕ್ರಮ ಸಾಗಾಟ ಕಂಡು ಬಂದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅಪರಾಧ ಪ್ರಕರಣ ದಾಖಲಾಗುತ್ತದೆ. ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಿಎಸ್ಐ ಡಿ.ಎಂ. ಮುಲ್ಲಾ, ಸುಧಾ ಹಲಕಿ, ಮುಖಂಡರಾದ ಎ.ಡಿ. ಮುಜಾವಾರ, ದಾವಲಸಾಬ ಲಕ್ಷ್ಮೇಶ್ವರ, ದಾವೂದ್ ಜಮಾಲಸಾಬನವರ, ಲಾಲಾಸಾಬಪೀರ ಮಕಾಂದಾರ, ಮುನ್ನಾ ಡಾಲಾಯತ, ಎಂ.ಎ. ನದ್ದಿಮುಲ್ಲಾ, ಇಸಾಕ್ ಹೊಸಮನಿ, ರಾಜೇಸಾಬ ಸೈಯದಬಡೆ, ಜಾಫರ್ ಭದ್ರಾಪೂರ, ಖಲಂದರ ಗಾಡಿ ಹಾಗೂ ರಮೇಶ್ ಮ್ಯಾಗೇರಿ ಉಪಸ್ಥಿತರಿದ್ದರು.



