ವಿಜಯಸಾಕ್ಷಿ ಸುದ್ದಿ, ಗದಗ: “ಕೋಮುದ್ವೇಷ ಬಿತ್ತುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಇದೇ ತಿಂಗಳ ೩೧ರಂದು ನಗರದಲ್ಲಿ ಆಯೋಜಿಸಿರುವ ‘ಹಿಂದೂ ಸಮಾವೇಶ’ವು ಬಸವಾದಿ ಶರಣ ಪರಂಪರೆಯನ್ನು ನಾಶಗೊಳಿಸುವ ಹುನ್ನಾರವಾಗಿದೆ” ಎಂದು ಆರೋಪಿಸಿ, ಸಮಾನ ಮನಸ್ಕರು, ಬಸವಾದಿ ಶರಣರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು, “ಹಿಂದೂ ಸಮಾವೇಶ”ಕ್ಕೆ ಸಂಘಟಿತ ಪ್ರತಿರೋಧ ವ್ಯಕ್ತಪಡಿಸುವ ನಿರ್ಧಾರ ಕೈಗೊಂಡರು.
ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಅಶೋಕ ಬರಗುಂಡಿ ಮಾತನಾಡಿ, “ಸಮತೆಯ ಬದುಕು ಕಟ್ಟಿಕೊಟ್ಟ ಶರಣರು ಇಷ್ಟಲಿಂಗದಲ್ಲಿ ಬೆರೆತು ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕಿದರು. ಇದನ್ನು ಸಹಿಸದ ಮನುವಾದಿಗಳು ಹಾಗೂ ವೈದಿಕ ಮನಸ್ಥಿತಿಯವರು ಶರಣ ಪರಂಪರೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಗದಗದಲ್ಲಿ ಹಿಂದೂ ಸಮಾವೇಶ ನಡೆಸುವ ಮೂಲಕ ಬಸವಣ್ಣನವರ ವಿಚಾರಧಾರೆಗೆ ನುಗ್ಗುವ ಯತ್ನ ನಡೆಯುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು” ಎಂದು ಹೇಳಿದರು.
“ಗದಗದಲ್ಲಿ ಪ್ರತಿರೋಧ ವ್ಯಕ್ತವಾಗುವುದಿಲ್ಲವೆಂದು ಭಾವಿಸಿ ಆರ್‌ಎಸ್‌ಎಸ್ ಹಾಗೂ ಮನುವಾದಿ ಶಕ್ತಿಗಳು ಸಮಾವೇಶ ಹಮ್ಮಿಕೊಂಡಿವೆ. ಇದಕ್ಕೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಬೇಕು” ಎಂದು ಅವರು ಕರೆ ನೀಡಿದರು.
ದಲಿತ ಹೋರಾಟಗಾರ ಶರೀಫ್ ಬಿಳೆಯಲಿ ಮಾತನಾಡಿ, “ಒಂದು ವರ್ಷದ ಹಿಂದೆ ಆರ್‌ಎಸ್‌ಎಸ್ ಹಾಗೂ ಹಿಂದೂ ಸಂಘಟನೆಗಳು ಮಹಾಯಜ್ಞ, ಕುಂಭಮೇಳ ನಡೆಸಿದ್ದವು. ಈಗ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸಲು ಮುಂದಾಗಿವೆ. ಬಸವಣ್ಣನವರ ವಚನಗಳನ್ನು ಮಾತ್ರವಲ್ಲ, ಇಡೀ ಶೋಷಿತ ವರ್ಗದ ಚಿಂತನೆಗಳನ್ನೇ ನಾಶಗೊಳಿಸುವ ಪ್ರಯತ್ನ ಇದಾಗಿದೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲೇಬೇಕು” ಎಂದು ಹೇಳಿದರು.
ದಲಿತ ಮುಖಂಡ ಮುತ್ತು ಬಿಳೆಯಲಿ ಮಾತನಾಡಿ, “ಆರ್‌ಎಸ್‌ಎಸ್ ಪ್ರಚಾರಕರಾದ ಕನ್ಹೇರಿ ಸ್ವಾಮೀಜಿ ಎಲ್ಲೆಡೆ ಅಶ್ಲೀಲ ಹಾಗೂ ಪ್ರಚೋದನಕಾರಿ ಭಾಷಣಗಳ ಮೂಲಕ ಕೋಮುದ್ವೇಷ ಹರಡುತ್ತಿದ್ದಾರೆ. ಈಗ ಗದಗದ ಸೌಹಾರ್ದತೆಯನ್ನೇ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.
“ಈ ಹಿಂದೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗದಗದಲ್ಲೂ ಜಿಲ್ಲೆಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ವಚನ ದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿಯೇ ನಾವು ಪ್ರತಿರೋಧ ವ್ಯಕ್ತಪಡಿಸಿದ್ದೆವು. ಇಂತಹ ಕೋಮುವಾದಿಗಳ ವಿರುದ್ಧ ಜಿಲ್ಲಾವ್ಯಾಪಿ ಹೋರಾಟ ನಡೆಸಬೇಕು” ಎಂದು ಹೇಳಿದರು.
“ಮಠಗಳ ನಿಲುವುಗಳ ಬಗ್ಗೆ ಆತ್ಮಾವಲೋಕನ ಅಗತ್ಯ”
ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, “ನಾವು ಭಾವನಾತ್ಮಕ ಹಾಗೂ ವೈಚಾರಿಕವಾಗಿ ಬಸವಣ್ಣನವರ ಆಶಯಗಳನ್ನು ಒಪ್ಪಿಕೊಂಡವರು. ಆದರೆ ಕೆಲವು ಮಠಗಳು ಲಿಂಗಾಯತ ಹಾಗೂ ಶರಣ ಸಂಸ್ಕೃತಿಯಂತೆ ನಡೆದುಕೊಳ್ಳುತ್ತಿಲ್ಲ. ಇಡೀ ಜಿಲ್ಲೆಯ ವಾತಾವರಣವೇ ಬೇರೆಯಾಗಬಹುದಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಹಿರಿಯ ಮುಖಂಡರಾದ ಎಸ್.ಎನ್. ಬಳ್ಳಾರಿ ಅವರು ಮಾತನಾಡಿ, “ತಿಳಿದವರೇ, ಅರಿವಿರುವವರೇ ಆಮಿಷಗಳಿಗೆ ಒಳಗಾಗಿ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಇದು ದುಃಖಕರ ಸಂಗತಿ. ಆದ್ದರಿಂದ ಮನೆ ಮನೆಗೆ, ವಾರ್ಡ್ ವಾರ್ಡ್‌ಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ಸಮಾವೇಶದ ವಿರುದ್ಧ ಜನಾಭಿಪ್ರಾಯ ನಿರ್ಮಿಸಬೇಕು” ಎಂದು ಹೇಳಿದರು.
ಸಭೆಯಲ್ಲಿ ಬಸವರಾಜ ಎಂ. ಕಡೇಮನಿ, ಎಚ್.ಎಸ್. ಸೊಂಪೂರ, ಕೊಟ್ರಬಸಪ್ಪ ಚಟ್ಟಿ, ವಿ.ಕೆ. ಕರೇಗೌಡ್ರ, ದಿಲೀಪಕುಮಾರ ಹಲವಾಗಲಿ, ಪ್ರಕಾಶ ಅಸುಂಡಿ, ಮಂಜುನಾಥ ಹಗೇದಾಳ, ಎಸ್.ಐ. ಪವಾಡಗೌಡ್ರ, ಆನಂದ ಶಿಂಗಾಡಿ, ನಾಗಭೂಷಣ ಬಡಗನ್ನವರ, ಸುವರ್ಣ ಗಾಳಪ್ಪನವರ, ಸುಜಾತಾ ವಾರದ, ಮಂಗಳಾ ನಾಲವಾಡ, ಬಾಲರಾಜ ಅರಬರ, ಶಿವಾನಂದ ತಮ್ಮಣ್ಣವರ, ಪರಶು ಕಾಳೆ, ಅನಿಲ್ ಕಾಳೆ, ಬಸೂ ಬಿಳೆಯಲಿ, ಮಂಜುನಾಥ ಹಗೇದಾಳ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವದಳ, ಮೇ ಸಾಹಿತ್ಯ ಮೇಳ, ದಲಿತ ಕಲಾ ಮಂಡಳಿ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆಯ ಪ್ರಮುಖ ತೀರ್ಮಾನಗಳು
- ಸಭೆಯಲ್ಲಿ ಚರ್ಚಿಸಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು
- ನಿಜ ಶರಣರ ಸಮಾವೇಶ ಆಯೋಜಿಸಿ ವಚನ ಚಳುವಳಿಯನ್ನು ಮನೆಮನೆಗೂ ತಲುಪಿಸುವುದು
- ಕೋಮುದ್ವೇಷ ಬಿತ್ತುತ್ತಿದ್ದಾರೆ ಎನ್ನಲಾದ ಕನ್ಹೇರಿ ಮಠದ ಸ್ವಾಮೀಜಿಗೆ ಗದಗ ಜಿಲ್ಲೆ ಪ್ರವೇಶ ನಿರ್ಬಂಧಿಸಲು ಆಗ್ರಹಿಸುವುದು
- ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನ ನಡೆಸುವುದು
- ಹಿಂದೂ ಸಮಾವೇಶಕ್ಕೆ ಸಂಘಟಿತ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸುವುದು
“ ತೋಂಟದಾರ್ಯ ಮಠದ ಜಾತ್ರಾ ಸಮಿತಿಯ ಅಧ್ಯಕ್ಷರೇ ಈ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದರೆ, ಆ ಮಠದ ಆಯ್ಕೆಗಳ ಬಗ್ಗೆ ಯೋಚನೆ ಮಾಡಬೇಕಿದೆ. ಇದು ಆರೋಪದ ಭಾಷೆಯಲ್ಲ, ಒಳಸಂಕಟದಿಂದ ಹೇಳುತ್ತಿರುವ ಮಾತು. ನಡೆಯಲಿರುವ ಹಿಂದೂ ಸಮಾವೇಶವನ್ನು ನಾವೆಲ್ಲರೂ ಪ್ರತಿಭಟಿಸಬೇಕಿದೆ”ಬಸವರಾಜ ಸೂಳಿಬಾವಿಬಂಡಾಯ ಸಾಹಿತಿ



