ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಔಷಧಿಗಳ ಅಕ್ರಮ ಆನ್‌ಲೈನ್ ಮಾರಾಟವನ್ನು ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ-ಶಿರಹಟ್ಟಿ ತಾಲೂಕಿನ ಔಷಧ ವಿತರಕರ ಸಂಘದ ವತಿಯಿಂದ ಬುಧವಾರ ಸಾಂಕೇತಿಕ ಬಂದ್ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಶಿರಹಟ್ಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಔಷಧ ವಿತರಕರು, ರಸಾಯನಶಾಸ್ತ್ರಜ್ಞರು ಹಾಗೂ ಔಷಧಶಾಸ್ತ್ರಜ್ಞರು ಭಾಗವಹಿಸಿ ಆನ್‌ಲೈನ್ ಔಷಧಿ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಾ. ಪವನ ತುಕಾರಾಮ ಮಹೇಂದ್ರಕರ, ಅಕ್ರಮ ಆನ್‌ಲೈನ್ ಔಷಧಿ ಮಾರಾಟದ ವಿರುದ್ಧ ದೀರ್ಘಕಾಲದಿಂದ ಸಂಘಟನೆ ವತಿಯಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಆನ್‌ಲೈನ್ ಮೂಲಕ ವೈದ್ಯಕೀಯ ಸಮಾಲೋಚನೆ ಇಲ್ಲದೇ ಔಷಧಿಗಳ ಮನೆ ವಿತರಣೆ, ನಕಲಿ ಇ-ಪ್ರಿಸ್ಕ್ರಿಪ್ಷನ್ ಬಳಕೆ ಹಾಗೂ ಅತಿಯಾದ ರಿಯಾಯಿತಿ ಪದ್ಧತಿಗಳು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟು ಮಾಡುತ್ತಿವೆ ಎಂದು ಹೇಳಿದರು.
ಪರಿಶೀಲಿತ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣ ನಿಷೇಧಿಸಬೇಕು. ಜಿಎಸ್‌ಆರ್ 817(ಇ) ಮತ್ತು ಜಿಎಸ್‌ಆರ್ 220(ಇ) ನಿಯಮಗಳನ್ನು ತಕ್ಷಣ ಹಿಂಪಡೆಯಬೇಕು. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಲೂಟಿಕೋರ ರಿಯಾಯಿತಿ ನೀತಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಡಾ. ಸುನೀಲ್ ಬುರಬುರೆ, ಪವನ ನರಗುಂದ, ಭೂಪಾಲ ಆಲೂರ, ಸಾಗರ ಮಹೇಂದ್ರಕರ, ಡಾ. ಗೋನಾಳ, ಫಕ್ಕೀರಡ್ಡಿ ಮರಡ್ಡಿ, ಸಾಗರ ಹಿರೇಗೌಡರ, ದತ್ತಾತ್ರೇಯ ಬಿಜಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಅಕ್ರಮ ಹಾಗೂ ಅನಿಯಂತ್ರಿತ ಆನ್‌ಲೈನ್ ಔಷಧಿ ಮಾರಾಟವು ರೋಗಿಗಳ ಆರೋಗ್ಯಕ್ಕೆ ಮಾತ್ರವಲ್ಲ, ಪರವಾನಗಿ ಪಡೆದ ಔಷಧ ವ್ಯಾಪಾರಸ್ಥರ ಉಳಿವಿಗೂ ದೊಡ್ಡ ಬೆದರಿಕೆಯಾಗಿದೆ”
ಡಾ. ಪವನ ಮಹೇಂದ್ರಕರ
ವ್ಯಾಪಾರಸ್ಥ



