ಗದಗ/ಬೆಂಗಳೂರು: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿಯ ಪಾರಂಪರಿಕ ವೈಭವವನ್ನು ಮರು ಅನಾವರಣಗೊಳಿಸಲು ಇದೀಗ ಉಪಗ್ರಹ ತಂತ್ರಜ್ಞಾನದ ನೆರವು ಪಡೆಯಲು ಸರ್ಕಾರ ಮುಂದಾಗಿದೆ.
ಮಣ್ಣಿನಡಿ ಅಡಗಿರುವ ಪುರಾತತ್ವ ಸಂಪತ್ತು, ಉತ್ಖನನ ಸ್ಥಳಗಳು ಹಾಗೂ “ನೂರೊಂದು ಗುಡಿ–ನೂರೊಂದು ಭಾವಿ”ಗಳ ಗುರುತು ಪತ್ತೆಗಾಗಿ ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ ಬಳಕೆಯ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಿತು.
ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಎನ್ಐಎಎಸ್ (NIAS) ಸಂಸ್ಥೆಯ ತಜ್ಞರು ಭಾಗವಹಿಸಿ, ಲಕ್ಕುಂಡಿ ಪ್ರದೇಶದ ಪುರಾತತ್ವ ಅಧ್ಯಯನವನ್ನು ವೈಜ್ಞಾನಿಕವಾಗಿ ಕೈಗೊಳ್ಳುವ ಕುರಿತು ಸಮಗ್ರ ಚರ್ಚೆ ನಡೆಸಿದರು.
ಸಭೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ಅಧ್ಯಕ್ಷ ಡಾ. ಕೆ. ಕಿರಣಕುಮಾರ ಉಪಸ್ಥಿತರಿದ್ದು, ಉಪಗ್ರಹ ಚಿತ್ರಣ ತಂತ್ರಜ್ಞಾನದ ಮೂಲಕ ನೆಲದಡಿ ಅಡಗಿರುವ ಪುರಾತನ ದೇವಾಲಯಗಳು, ಪಾರಂಪರಿಕ ಕಟ್ಟಡಗಳು ಹಾಗೂ ಜಲಸಂಪನ್ಮೂಲಗಳನ್ನು ಪತ್ತೆಹಚ್ಚುವ ತಾಂತ್ರಿಕ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಲಕ್ಕುಂಡಿಯ ಐತಿಹಾಸಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಜೊತೆಗೆ ಪಾರಂಪರಿಕ ತಾಣಗಳ ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆಯ ಅಗತ್ಯತೆಯನ್ನು ಸಭೆಯಲ್ಲಿ ಒತ್ತಿಹೇಳಲಾಯಿತು.
“ಲಕ್ಕುಂಡಿ ಕೇವಲ ಐತಿಹಾಸಿಕ ಗ್ರಾಮವಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕ. ಅದರ ಅಡಗಿರುವ ಇತಿಹಾಸವನ್ನು ಜಗತ್ತಿನ ಮುಂದಿಡುವ ಕೆಲಸ ನಡೆಯಬೇಕು” ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹಾಗೂ ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಉಪಸ್ಥಿತರಿದ್ದರು.



