ಕೋಲಾರಾ: ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಶಿಕ್ಷಣದ ಕನಸನ್ನು ಕೈಬಿಡದ ವಿದ್ಯಾರ್ಥಿನಿಯೊಬ್ಬಳ ಸಾಧನೆ ಇದೀಗ ಎಲ್ಲರ ಮನ ಗೆದ್ದಿದೆ. ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿಯ ಕುಸುಮಾ ಎಂಬ ವಿದ್ಯಾರ್ಥಿನಿ ಸ್ಟ್ರೇಚರ್‌ನಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ.
ಭೀಕರ ರಸ್ತೆ ಅಪಘಾತದಲ್ಲಿ ತನ್ನ ಒಂದು ಕಾಲು ಕಳೆದುಕೊಂಡಿದ್ದ ಕುಸುಮಾ, ಚಿಕಿತ್ಸೆ ನಡುವೆಯೇ ಪರೀಕ್ಷೆ ಬರೆಯಲು ನಿರ್ಧರಿಸಿದ್ದಳು. ವೈದ್ಯರ ಸಲಹೆ ನಡುವೆಯೂ ಧೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಎದುರಿಸಿದ್ದಳು.
ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕುಸುಮಾ ಉತ್ತಮ ಅಂಕಗಳೊಂದಿಗೆ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾಳೆ. ಆಕೆಯ ಹೋರಾಟ ಮತ್ತು ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವಿಷಯ ತಿಳಿದ ಕೆಜಿಎಫ್ ಶಾಸಕಿಯರಾದ ರೂಪಕಲಾ ಶಶಿಧರ್ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಜೊತೆಗೆ ಮುಂದಿನ ಚಿಕಿತ್ಸೆ ಹಾಗೂ ರೋಬೋಟಿಕ್ ಕೃತಕ ಕಾಲು ಅಳವಡಿಕೆಗೆ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
‘ಲೈಫ್ ಸೇವರ್’ ಸಂಸ್ಥೆಯ ಸಹಯೋಗದಲ್ಲಿ ಕುಸುಮಾಗೆ ಅತ್ಯಾಧುನಿಕ ಕೃತಕ ಕಾಲು ಅಳವಡಿಸುವ ಕಾರ್ಯ ನಡೆಯಲಿದ್ದು, ಬಾಲಕಿಯ ಜೀವನಕ್ಕೆ ಹೊಸ ಭರವಸೆ ಮೂಡಿದೆ.



