ತುಮಕೂರು: ತಹಶೀಲ್ದಾರ್ ಕಚೇರಿಯಲ್ಲೇ ಸರ್ಕಾರಿ ದಾಖಲೆಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಮಾಹಿತಿ ಆಯೋಗದ ಮಧ್ಯಪ್ರವೇಶದ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹೆಬ್ಬೂರು ಹೋಬಳಿಯ ಜೋಡಿ ಕಲ್ಕರೆ ಗ್ರಾಮದ ಇನಾಂ ಜಮೀನಿಗೆ ಸಂಬಂಧಿಸಿದ ಮಹತ್ವದ ಮೂಲ ದಾಖಲೆಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೊಡ್ಡಶಾನಯ್ಯ ಅವರ ಸಹಿ ಹೊಂದಿದ್ದ ಮೂಲ ಅರ್ಜಿ, ವಂಶವೃಕ್ಷ ದಾಖಲೆಗಳು ಹಾಗೂ ಮರಣ ಪ್ರಮಾಣಪತ್ರಗಳನ್ನು ಒಳಗೊಂಡ ಕಡತ ಕಾಣೆಯಾಗಿರುವುದಾಗಿ ತಿಳಿದುಬಂದಿದೆ. ದಾಖಲೆಗಳಿಗಾಗಿ ಅರ್ಜಿದಾರರು ಪದೇ ಪದೇ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ವಿಷಯ ರಾಜ್ಯ ಮಾಹಿತಿ ಆಯೋಗದ ಮೆಟ್ಟಿಲೇರಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ, ನಾಪತ್ತೆಯಾದ ದಾಖಲೆಗಳ ಕುರಿತು ಅಫಿಡವಿಟ್ ಸಲ್ಲಿಸಲು ಗಡುವು ನೀಡಿತ್ತು. ಈ ಬೆಳವಣಿಗೆಯ ನಂತರ ತಹಶೀಲ್ದಾರ್ ರಾಜೇಶ್ವರಿ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾತನಾಡಿದ ತಹಶೀಲ್ದಾರ್ ರಾಜೇಶ್ವರಿ, “2023ರಲ್ಲಿ ಸಲ್ಲಿಸಲಾದ ಅರ್ಜಿಯ ಆಧಾರದಲ್ಲಿ ದಾಖಲೆಗಳನ್ನು ಹುಡುಕಿದಾಗಲೇ ಕಡತ ಕಾಣೆಯಾಗಿರುವುದು ಗೊತ್ತಾಗಿತ್ತು. ಬಳಿಕ ಈ ಬಗ್ಗೆ ಅರ್ಜಿದಾರರಿಗೆ ಲಿಖಿತ ಮಾಹಿತಿ ನೀಡಲಾಗಿತ್ತು. ಮಾಹಿತಿ ಆಯೋಗದ ನಿರ್ದೇಶನದಂತೆ ಈಗ ಪೊಲೀಸ್ ದೂರು ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಅರ್ಜಿದಾರ ಶ್ರೀನಿವಾಸ ಕಲ್ಕೆರೆ ಈ ಪ್ರಕರಣದಲ್ಲಿ ಉದ್ದೇಶಪೂರ್ವಕ ಸಂಚು ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನನಗೆ ಸಿಗಬೇಕಿದ್ದ 5 ಎಕರೆ 28 ಗುಂಟೆ ಇನಾಂ ಜಮೀನಿನ ದಾಖಲೆಗಳನ್ನೇ ಕಾಣೆಯಾಗಿಸಲಾಗಿದೆ. ಆರ್‌ಐ ಮತ್ತು ವಿಎ ಅಧಿಕಾರಿಗಳು ಈ ಕಡತಗಳನ್ನು ಈಗಾಗಲೇ ಪರಿಶೀಲಿಸಿದ್ದರು. ಬಳಿಕವೇ ಅವು ನಾಪತ್ತೆಯಾಗಿವೆ. ಇದು ಸಾಮಾನ್ಯ ನಿರ್ಲಕ್ಷ್ಯ ಅಲ್ಲ” ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರಿ ಕಚೇರಿಯಲ್ಲೇ ಮೂಲ ದಾಖಲೆಗಳು ಕಾಣೆಯಾಗಿರುವುದು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದ್ದು, ಪ್ರಕರಣದ ತನಿಖೆ ಇದೀಗ ಕುತೂಹಲ ಕೆರಳಿಸಿದೆ.



