ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕು ವ್ಯಾಪ್ತಿಯ ಹಂಪಸಾಗರ ನಾಡಕಚೇರಿಯ ಅಟಲ್ ಜಿ ಜನಸ್ನೇಹಿ ಕೇಂದ್ರವು ವಿವಿಧ ಪ್ರಮಾಣಪತ್ರಗಳ ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನ ಶೇ.100 ರಷ್ಟು ವಿಲೇವಾರಿ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ಈ ಸಾಧನೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್. ಕವಿತಾ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.
ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಪ್ರಮಾಣಪತ್ರಗಳನ್ನು ಶೀಘ್ರ ವಿತರಿಸುವಲ್ಲಿ ಹಂಪಸಾಗರ ನಾಡಕಚೇರಿ ಕಾರ್ಯಕ್ಷಮತೆ ಮೆರೆದಿದ್ದು, ಉಪ ತಹಸೀಲ್ದಾರ್ ಆಸಿಫ್ ಅಲಿ ಅವರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿದೆ.
354 ಅರ್ಜಿಗಳ ಶೇ.100 ವಿಲೇವಾರಿ
ನವೆಂಬರ್ 2025ರ ಅವಧಿಯಲ್ಲಿ ನಾಡಕಚೇರಿಯಲ್ಲಿ ಸ್ವೀಕರಿಸಲಾದ 354 ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನವೇ ಸಂಪೂರ್ಣವಾಗಿ ವಿಲೇವಾರಿ ಮಾಡುವ ಮೂಲಕ 10 ಸಿಗ್ಮಾ ಮಟ್ಟ ಸಾಧಿಸಲಾಗಿದೆ.
16.00 ವಿಲೇವಾರಿ ಸೂಚ್ಯಂಕದ ಪ್ರಕಾರ 17 ಪಟ್ಟು ವೇಗದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ, 1000ಕ್ಕಿಂತ ಕಡಿಮೆ ಅರ್ಜಿಗಳನ್ನು ಸ್ವೀಕರಿಸುವ ನಾಡಕಚೇರಿ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಾಗಿದೆ.
ಸಿಬ್ಬಂದಿ ಕಾರ್ಯತತ್ಪರತೆಗೆ ಮೆಚ್ಚುಗೆ
ಅಟಲ್ ಜಿ ಜನಸ್ನೇಹಿ ಕೇಂದ್ರಾಲಯದ ಪರವಾಗಿ ಹಂಪಸಾಗರ ನಾಡಕಚೇರಿ ಸಿಬ್ಬಂದಿ ತಂಡಕ್ಕೆ ಅಭಿನಂದನಾ ಪತ್ರ ನೀಡಲಾಗಿದ್ದು, ಸಿಬ್ಬಂದಿಯ ಸಹಕಾರ, ಕಾರ್ಯತತ್ಪರತೆ ಹಾಗೂ ಸಾರ್ವಜನಿಕ ಸೇವೆಯ ಮೇಲಿನ ಬದ್ಧತೆಯೇ ಈ ಸಾಧನೆಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.
ಮುಂದಿನ ದಿನಗಳಲ್ಲೂ ಇದೇ ರೀತಿಯ ಕಾರ್ಯಕ್ಷಮತೆ ಮತ್ತು ಜನಸೇವೆಯನ್ನು ಮುಂದುವರಿಸುವಂತೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಸಹಿಯೊಂದಿಗೆ ನೀಡಲಾದ ಅಭಿನಂದನಾ ಪತ್ರವು ಸಿಬ್ಬಂದಿಯಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ.
“ಸಮಯಪಾಲನೆ, ಕಾರ್ಯತತ್ಪರತೆ ಮತ್ತು ಸಾರ್ವಜನಿಕ ಸೇವೆಯ ಬದ್ಧತೆಯಿಂದಲೇ ರಾಜ್ಯ ಮಟ್ಟದ ಸಾಧನೆ ಸಾಧ್ಯವಾಗಿದೆ.”
ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ



