ರಾಮನಗರ: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾರೋಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ನಿಖಿಲ್ ಕುಮಾರಸ್ವಾಮಿ ತಮ್ಮ ವಯಸ್ಸಿಗೆ ಹಾಗೂ ಅನುಭವಕ್ಕೆ ತಕ್ಕಂತೆ ಮಾತನಾಡಿದರೆ ಒಳ್ಳೆಯದು ಎಂದು ಟೀಕಿಸಿದರು.
ನಿಖಿಲ್‌ಗೆ ಇನ್ನೂ ರಾಜಕೀಯ ಅನುಭವ ಕಡಿಮೆ. ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುರಿತೂ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಮತ್ತು ಕುಮಾರಸ್ವಾಮಿ ಒಂದೇ ವಯಸ್ಸಿನವರು. ರಾಜಕೀಯದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಬೇಕು ಎಂದು ಪರೋಕ್ಷವಾಗಿ ನಿಖಿಲ್‌ಗೆ ತಿರುಗೇಟು ನೀಡಿದರು.
ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಆದಷ್ಟು ಬೇಗ ಎಲ್ಲವೂ ಒಳ್ಳೆಯದಾಗಲಿದೆ. ಸಿಹಿ ಸುದ್ದಿ ಬರಲಿದೆ. ಸ್ವಲ್ಪ ದಿನ ಕಾಯಬೇಕು ಅಷ್ಟೇ ಎಂದು ಕುತೂಹಲಕಾರಿ ಹೇಳಿಕೆ ನೀಡಿದರು.



