ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸಿನಿಮೀಯ ಶೈಲಿಯ ಅಕ್ರಮ ಸ್ಪಿರಿಟ್ ಸಾಗಣೆ ಜಾಲ ಬಯಲಾಗಿದೆ. ಆಯಿಲ್ ಟ್ಯಾಂಕರ್ ಹೆಸರಿನಲ್ಲಿ ಸಾಗಿಸಲಾಗುತ್ತಿದ್ದ ವಾಹನದೊಳಗೆ 14 ಸಾವಿರ ಲೀಟರ್ ಸ್ಪಿರಿಟ್ ಪತ್ತೆಯಾಗಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ.
ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಸ್ಪಿರಿಟ್ ಅನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಗ್ಯಾಂಗ್ ವಿಶೇಷ ತಂತ್ರ ಬಳಸಿತ್ತು. ಟ್ಯಾಂಕರ್‌ನ ಕೆಲವು ಭಾಗಗಳಲ್ಲಿ ಮಾತ್ರ ಆಯಿಲ್ ತುಂಬಿಸಿ, ಸಣ್ಣ ಪೈಪ್‌ಗಳ ಮೂಲಕ ಅದನ್ನು ಹೊರಗೆ ತೋರಿಸಲಾಗುತ್ತಿತ್ತು. ಉಳಿದ ಭಾಗಗಳಲ್ಲಿ ಭಾರಿ ಪ್ರಮಾಣದ ಸ್ಪಿರಿಟ್ ಸಂಗ್ರಹಿಸಿ ಅಕ್ರಮ ಸಾಗಣೆ ನಡೆಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾನಾಪುರ ಅಬಕಾರಿ ಅಧಿಕಾರಿಗಳು ಟ್ಯಾಂಕರ್‌ನ ಒಳಭಾಗ ಪರಿಶೀಲಿಸಿದಾಗ, ಆಯಿಲ್ ಪೈಪ್‌ಗಳ ಸುತ್ತಲೂ ಸ್ಪಿರಿಟ್ ತುಂಬಿರುವುದು ಪತ್ತೆಯಾಗಿದೆ.
ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಬರುತ್ತದೆ. ಆದರೆ ಈ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಸ್ಪಿರಿಟ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಸದ್ಯ ಅಬಕಾರಿ ಇಲಾಖೆ ಇಡೀ ಜಾಲದ ಬೇರು ಪತ್ತೆಹಚ್ಚಲು ಮುಂದಾಗಿದ್ದು, ಬಂಧಿತ ಆರೋಪಿಯಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದೆ.



