ಬಾದಾಮಿ: ಜಿಲ್ಲೆಯ ಐತಿಹಾಸಿಕ ಅಗಸ್ತ್ಯ ಹೊಂಡದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಜಯನಗರ ನಿವಾಸಿ ಮನೋಜ್ ಪ್ರಕಾಶ್ ಕಂಬ್ಳೇಕರ್ (19) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಮನೋಜ್ ತನ್ನ ಬಟ್ಟೆಗಳನ್ನು ಹೊಂಡದ ಬದಿಯಲ್ಲಿ ಬಿಟ್ಟು ನೀರಿಗೆ ಇಳಿದಿದ್ದಾನೆ ಎನ್ನಲಾಗಿದೆ. ಆದರೆ ಸಾಕಷ್ಟು ಸಮಯ ಕಳೆದರೂ ಆತ ಮೇಲಕ್ಕೆ ಬರದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ತಕ್ಷಣ 112 ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕುಟುಂಬ ಸದಸ್ಯರ ಸಹಾಯದಿಂದ ಯುವಕನ ಗುರುತು ದೃಢಪಡಿಸಿದ್ದಾರೆ.
ಇದೀಗ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಹೊಂಡದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಇನ್ನೂ ಯುವಕನ ಪತ್ತೆಯಾಗಿಲ್ಲ. ಘಟನೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.



