ಗದಗ: ಮೇ 17ರಂದು ಸುರಿದ ಭಾರಿ ಗಾಳಿ-ಮಳೆಗೆ ಮನೆಗಳ ಮೇಲ್ಚಾವಣಿ ಕಳೆದುಕೊಂಡು ಬೀದಿಗಿಳಿದ ಗಂಗಿಮಡಿ ಪ್ರದೇಶದ ನೂರಾರು ಕುಟುಂಬಗಳಿಗೆ ಜಿಲ್ಲಾಡಳಿತ ಆರಂಭಿಸಿದ್ದ ಕಾಳಜಿ ಕೇಂದ್ರವೇ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಶೆಡ್‌ಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಧಿಕಾರಿಗಳು ಏಕಾಏಕಿ ಕಾಳಜಿ ಕೇಂದ್ರಕ್ಕೆ ಬೀಗ ಜಡಿದು ಸಂತ್ರಸ್ತರನ್ನು ಹೊರಹಾಕಿರುವ ಆರೋಪ ಕೇಳಿಬಂದಿದ್ದು, ಜಿಲ್ಲಾಡಳಿತದ ಅಮಾನವೀಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಭಾರಿ ಗಾಳಿ-ಮಳೆಯಿಂದ 30ಕ್ಕೂ ಹೆಚ್ಚು ಶೆಡ್‌ಗಳ ಶೀಟುಗಳು ಹಾರಿ ಹೋಗಿದ್ದರಿಂದ ಅನೇಕ ಕುಟುಂಬಗಳು ಆಶ್ರಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಂಗಿಮಡಿ ಶಾಲೆಯಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭಿಸಿತ್ತು. ಆದರೆ, ಇನ್ನೂ ಮನೆಗಳ ದುರಸ್ತಿ ಪೂರ್ಣಗೊಳ್ಳದಿದ್ದರೂ ಏಕಾಏಕಿ ಕೇಂದ್ರವನ್ನು ಬಂದ್ ಮಾಡಿ ಜನರನ್ನು ಹೊರಹಾಕಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಕಾಳಜಿ ಕೇಂದ್ರದಿಂದ ಹೊರಹಾಕಿದ ಬಳಿಕ ಗರ್ಭಿಣಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿ ನೂರಾರು ಮಂದಿ ಶಾಲೆಯ ಆವರಣದಲ್ಲೇ ರಾತ್ರಿಯಿಡೀ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿದ್ಯುತ್ ವ್ಯವಸ್ಥೆಯಿಲ್ಲದೆ ಕತ್ತಲಲ್ಲೇ ಕುಳಿತ ಮಹಿಳೆಯರು ಹಾಗೂ ಮಕ್ಕಳಲ್ಲಿ ವಿಷಜಂತುಗಳ ಭಯ ಹೆಚ್ಚಾಗಿತ್ತು.
ಸಂತ್ರಸ್ತರ ಆರೋಪದ ಪ್ರಕಾರ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ನಗರಸಭೆ ಆಯುಕ್ತ ರಾಜಾರಾಮ ಪವಾರ ಸ್ಥಳಕ್ಕೆ ಬಂದು ಶಾಲೆಗೆ ಬೀಗ ಜಡಿಸಿ ಹೊರಹಾಕಿದ್ದಾರೆ ಎನ್ನಲಾಗಿದೆ.
ಕೆಲವರಿಗೆ ₹5 ಸಾವಿರ ಪರಿಹಾರ ನೀಡಿದ್ದರೂ ಇನ್ನೂ ಅನೇಕ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಳೆ ಮತ್ತೆ ಬರಬಹುದಾದ ಪರಿಸ್ಥಿತಿ ಇದೆ. ನಮ್ಮ ಶೆಡ್‌ಗಳು ಇನ್ನೂ ರಿಪೇರಿ ಆಗಿಲ್ಲ. ಇಂತಹ ಸಮಯದಲ್ಲಿ ನಮ್ಮನ್ನು ಹೊರಹಾಕಿರುವುದು ಮಾನವೀಯತೆಯೇ?” ಎಂದು ಮಹಿಳೆಯರು ಕಣ್ಣೀರಿಟ್ಟರು.
ಕಾಳಜಿ ಕೇಂದ್ರದ ಆವರಣದಲ್ಲೇ ಉಪವಾಸ ಸತ್ಯಾಗ್ರಹದಂತ ವಾತಾವರಣ ನಿರ್ಮಾಣವಾಗಿದ್ದು, ಬೆಳಗ್ಗೆ 10 ಗಂಟೆಯಾದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಚಹಾ, ನೀರು, ಉಪಹಾರವೂ ಇಲ್ಲದೆ ಮಕ್ಕಳು ಹಾಗೂ ವೃದ್ಧರು ನರಳಾಡಿದ ದೃಶ್ಯ ಮನಕಲಕುವಂತಿತ್ತು. ಈ ವೇಳೆ ಒಬ್ಬ ಮಹಿಳೆ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದ ಘಟನೆ ಕೂಡ ಆತಂಕ ಹೆಚ್ಚಿಸಿತು.
ಇದೇ ವೇಳೆ ಸಂತ್ರಸ್ತರು ಶೆಡ್‌ಗಳ ತುರ್ತು ದುರಸ್ತಿ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸುವಂತೆ, ಎಲ್ಲ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಹಾಗೂ ಮಳೆಗಾಲ ಮುಗಿಯುವವರೆಗೂ ಸುರಕ್ಷಿತ ಆಶ್ರಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಬೇಕೆಂದು ಕೂಡ ಒತ್ತಾಯಿಸಿದ್ದಾರೆ.
ಗಂಗಿಮಡಿ ಸಂತ್ರಸ್ತರ ಈ ದುಸ್ಥಿತಿ ಜಿಲ್ಲಾಡಳಿತದ ತುರ್ತು ಸ್ಪಂದನೆ ಹಾಗೂ ಮಾನವೀಯ ನಡೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
“ನಮಗೆ ಊಟ ಕೊಡದಿದ್ದರೂ ಪರವಾಗಿಲ್ಲ. ನಮ್ಮ ಶೆಡ್‌ಗಳು ರಿಪೇರಿ ಆಗುವವರೆಗೂ ಶಾಲೆಯಲ್ಲಿ ಆಶ್ರಯ ನೀಡಲಿ. ಮಳೆ ಬಂದರೆ ನಾವು ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು?”
ಗಂಗಿಮಡಿ ಸಂತ್ರಸ್ತ ಮಹಿಳೆಯರ ಅಳಲು



