ಬೆಳಗಾವಿ: ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಿಯಕರನ ಜೊತೆ ಸೇರಿ ಗಂಡನ ಮನೆಯಲ್ಲೇ ಕಳ್ಳತನ ನಡೆಸಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.
ಹಸೀನಾ ನದಾಫ್ ಹಾಗೂ ಆಕೆಯ ಪ್ರಿಯಕರ ಹಣಮಂತ ಮಾರಾಪೂರ ಬಂಧಿತರು. ಆರೋಪಿಗಳು ಸುಮಾರು 21 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ, ಎರಡು ತಿಂಗಳ ಹಿಂದೆ ಶರೀಫ್ ಜೊತೆ ವಿವಾಹವಾಗಿದ್ದಳು. ಆದರೆ ಮದುವೆಯ ಬಳಿಕವೂ ಪ್ರಿಯಕರನ ಸಂಪರ್ಕ ಮುಂದುವರಿಸಿಕೊಂಡಿದ್ದಳು. ಕೊನೆಗೆ ಗಂಡನ ಮನೆಯ ಚಿನ್ನಾಭರಣ ಕದ್ದು ಪ್ರಿಯಕರನ ಜೊತೆ ಪರಾರಿಯಾಗಲು ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



