ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಹಜ್ಜೇನುಗಳ ದಾಳಿಗೆ ಒಳಗಾಗಿ ರೈತನೋರ್ವ ಮೃತಪಟ್ಟ ದುರ್ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ತಂಬ್ರಹಳ್ಳಿ ಗ್ರಾಮದ ತಳವಾರ ಹನುಮಂತಪ್ಪ (70) ಮೃತಪಟ್ಟ ರೈತ. ಮೇ 19ರಂದು ಶ್ರೀ ಬಂಡೆ ರಂಗಪ್ಪನ ಬೆಟ್ಟದ ಸಮೀಪದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಹಜ್ಜೇನುಗಳ ಗುಂಪು ದಾಳಿ ನಡೆಸಿದೆ. ದಾಳಿಯಿಂದ ಮೈತುಂಬ ಕಚ್ಚಿಸಿಕೊಂಡ ಹನುಮಂತಪ್ಪ ಅವರನ್ನು ತಕ್ಷಣ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಬಳಿಕ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಪುತ್ರ ಪ್ರವೀಣ ತಳವಾರ ನೀಡಿದ ದೂರಿನ ಮೇರೆಗೆ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



