ಬೆಂಗಳೂರು: ಜೈಲಿನಲ್ಲಿ ನಟ ದರ್ಶನ್ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬ ವದಂತಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರ ನನ್ನ ಗಮನಕ್ಕೆ ಬಂದ ಬಳಿಕ ಅಧಿಕಾರಿಗಳಿಂದ ಮೌಖಿಕವಾಗಿ ಮಾಹಿತಿ ಪಡೆದಿದ್ದೇನೆ. ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತು ಮತ್ತೇನೂ ವಿಷಯ ಇಲ್ಲ ಎಂದು ಹೇಳಿದರು.
ಇನ್ನೊಂದೆಡೆ, ಟೌನ್‌ಹಾಲ್ ಬಳಿ ನಾಳೆ ನಡೆಯಬೇಕಿದ್ದ ಸಿಜೆಪಿ ಬಹಿರಂಗ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿರುವ ವಿಚಾರಕ್ಕೂ ಗೃಹ ಸಚಿವರು ಪ್ರತಿಕ್ರಿಯಿಸಿದರು.
ಯಾವ ಉದ್ದೇಶಕ್ಕೆ ಕಾರ್ಯಕ್ರಮ ನಡೆಯುತ್ತಿದೆ, ಯಾರೆಲ್ಲ ಭಾಗವಹಿಸುತ್ತಾರೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಾರೆ. ಅನುಮತಿ ನೀಡಬೇಕಾ ಬೇಡವಾ ಅನ್ನೋದು ಪೊಲೀಸರ ನಿರ್ಧಾರ. ಪೊಲೀಸರು ನಿರಾಕರಣೆ ಮಾಡಿದ್ದಾರೆ ಅಂದ್ರೆ ಅದರ ಹಿಂದೆ ಕೆಲವು ಅಂಶಗಳು ಇರಬಹುದು ಎಂದು ಹೇಳಿದರು.
ನಮ್ಮ ಪಕ್ಷ ಮತ್ತು ನಾಯಕರ ಬೆಂಬಲ ಬೇರೆ ವಿಚಾರ. ಪೊಲೀಸರ ಕೆಲಸವನ್ನು ಪೊಲೀಸರು ಮಾಡುತ್ತಾರೆ. ರಾಜಕಾರಣಿಗಳ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ” ಎಂದು ಸ್ಪಷ್ಟಪಡಿಸಿದರು.
ಬಕ್ರೀದ್ ಹಬ್ಬದ ವೇಳೆ ಕುರ್ಬಾನಿಗೆ ರಕ್ಷಣೆ ನೀಡುವಂತೆ ವಕ್ಫ್ ಬೋರ್ಡ್ ಪತ್ರ ಬರೆದಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಗೃಹ ಸಚಿವರು, “ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಪೊಲೀಸರು ಸಾಮಾನ್ಯವಾಗಿ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚುವರಿ ಭದ್ರತೆ ಅಗತ್ಯವಿದ್ದರೆ ಅದನ್ನೂ ಮಾಡುತ್ತಾರೆ ಎಂದರು.
ವಕ್ಫ್ ಬೋರ್ಡ್‌ಗೆ ಏನು ಆತಂಕವಿದೆಯೋ ಗೊತ್ತಿಲ್ಲ. ಅವರು ಪತ್ರ ಬರೆದಿದ್ದರೆ, ಅದಕ್ಕೆ ಅನುಗುಣವಾಗಿ ಪೊಲೀಸರು ಸ್ಪಂದಿಸುತ್ತಾರೆ ಎಂದು ತಿಳಿಸಿದರು.



