ಚಿಕ್ಕಮಗಳೂರು: ಹಿಂದೂಗಳ ಮೇಲಿನ ದಾಳಿ ಪ್ರಕರಣಗಳನ್ನು ಹಿಂಪಡೆದು ರಾಜ್ಯ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಡ್ಲೆ ಮಶಾಕ್ ದರ್ಗಾ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ರಾಘವ ಚೈತನ್ಯ ಬೃಂದಾವನದ ಪೂಜೆಗೆ ಹೋದಾಗ ದಾಳಿ ಮಾಡಲಾಗಿತ್ತು. ಬಂದೋಬಸ್ತ್‌ಗೆ ಇದ್ದ ಪೊಲೀಸರು, ಎಸ್‌ಪಿ ಹಾಗೂ ಸಂಸದ ಖೂಬಾ ಅವರ ಕಾರಿನ ಮೇಲೂ ದಾಳಿ ನಡೆದಿತ್ತು ಎಂದು ಹೇಳಿದರು.
ಇಂತಹ ಪ್ರಕರಣಗಳಲ್ಲಿರುವ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆಯುವ ಮೂಲಕ ಸರ್ಕಾರ ಏನು ಸಂದೇಶ ಕೊಡುತ್ತಿದೆ? ಎಂದು ಪ್ರಶ್ನಿಸಿದರು.
ನಿಮ್ಮ ಜೊತೆ ನಾವಿದ್ದೇವೆ ಎಂಬ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಮ್ಯುನಲ್ ಮತ್ತು ಕ್ರಿಮಿನಲ್ ಮನೋಭಾವದವರಿಗೆ ರಕ್ಷಣೆ ನೀಡುವ ಕಾಂಗ್ರೆಸ್‌ನ ನೀತಿ ಸಮಾಜಘಾತುಕ ಮತ್ತು ಅಪಾಯಕಾರಿಯಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ, ರೈತರು ಅಥವಾ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ ಎಂದರು.
ಚಳುವಳಿ ಸಂಬಂಧಿತ ಪ್ರಕರಣಗಳನ್ನು ವಾಪಸ್ ಪಡೆಯುವುದು ಬೇರೆ. ಆದರೆ ಬೆಂಕಿ ಹಚ್ಚಿ, ದೊಣ್ಣೆ ಹಿಡಿದು ಹಿಂಸಾಚಾರ ನಡೆಸಿದ ಪ್ರಕರಣಗಳನ್ನು ಹಿಂಪಡೆಯುವುದು ಸಂಪೂರ್ಣ ಬೇರೆ ವಿಚಾರ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು.



