ರಾಮ್ ಚರಣ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರೂ, ಅವರ ಸಿನಿ ಪಯಣ ಸುಲಭವಾಗಿರಲಿಲ್ಲ. ಆರಂಭದಲ್ಲಿ ‘ಮಗಧೀರ’ ಚಿತ್ರದಿಂದ ಭರ್ಜರಿ ಯಶಸ್ಸು ಕಂಡರೂ, ನಂತರದ ಕೆಲವು ಸಿನಿಮಾಗಳ ಸೋಲುಗಳಿಂದ ಟಾಲಿವುಡ್‌ನಲ್ಲಿ ಅವರ ಸ್ಥಾನವೇ ಪ್ರಶ್ನೆಗೆ ಒಳಗಾಗಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.
ಈ ನಡುವೆ ‘ಆರ್‌ಆರ್‌ಆರ್’ ಚಿತ್ರದ ಚಿತ್ರೀಕರಣ ಆರಂಭವಾದ ವೇಳೆಯಲ್ಲೇ ಕೋವಿಡ್ ಲಾಕ್‌ಡೌನ್ ಘೋಷಣೆಯಾಗಿದ್ದು, ಇಡೀ ಚಿತ್ರರಂಗವೇ ಸ್ಥಗಿತಗೊಂಡಿತ್ತು. ಆ ಸಂದರ್ಭದಲ್ಲಿ ಮಾನಸಿಕವಾಗಿ ತೀವ್ರ ಒತ್ತಡ ಮತ್ತು ಅನಿಶ್ಚಿತತೆ ಎದುರಿಸಿದ್ದೆ ಎಂದು ರಾಮ್ ಚರಣ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಆ ಕಠಿಣ ದಿನಗಳಲ್ಲಿ ತಮಗೆ ಧೈರ್ಯ ನೀಡಿದ್ದು ನಿರ್ದೇಶಕ ಎಸ್ಎಸ್ ರಾಜಮೌಳಿ ಎಂದು ತಿಳಿಸಿದ್ದಾರೆ. “ಭವಿಷ್ಯದ ಬಗ್ಗೆ ಯೋಚಿಸಿ ಆತಂಕಪಡಬೇಡ, ನಿನ್ನನ್ನು ನೀನು ಸಿದ್ಧಪಡಿಸಿಕೋ” ಎಂದು ರಾಜಮೌಳಿ ನೀಡಿದ ಸಲಹೆ ತನ್ನಲ್ಲಿ ಹೊಸ ಶಕ್ತಿ ತುಂಬಿತು ಎಂದು ಚರಣ್ ಹೇಳಿದ್ದಾರೆ.
ಲಾಕ್‌ಡೌನ್ ಬಳಿಕ ‘ಆರ್‌ಆರ್‌ಆರ್’ ಸಿನಿಮಾ ಮತ್ತೆ ಚುರುಕುಗೊಂಡು ಭಾರೀ ಯಶಸ್ಸು ಕಂಡಿದ್ದು, ರಾಮ್ ಚರಣ್ ಅವರನ್ನು ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ನಟನನ್ನಾಗಿ ರೂಪಿಸಿದೆ.
ಇದೀಗ ಅವರು ನಟಿಸಿರುವ ‘ಪೆದ್ದಿ’ ಸಿನಿಮಾ ಜೂನ್ 4ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.



