ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಭಾಗದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚುತ್ತಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೆಟಗೇರಿಯಲ್ಲಿ ತಕ್ಷಣ ಸಾರಿಗೆ ಪೊಲೀಸ್ ಠಾಣೆ ಆರಂಭಿಸಬೇಕು ಎಂದು ಮುಖಂಡ ಸತೀಶ ಹುಲಿ ಒತ್ತಾಯಿಸಿದ್ದಾರೆ.
ಬೆಟಗೇರಿ ಭಾಗದಲ್ಲಿ ವಾಹನಗಳ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹುಯಿಲಗೋಳ ಕ್ರಾಸ್, ಬೆಟಗೇರಿ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳು ಹಾಗೂ ಸಾವಿನ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಸಾರಿಗೆ ನಿಯಂತ್ರಣದ ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಟಗೇರಿ ಭಾಗಕ್ಕೆ ಪ್ರತ್ಯೇಕ ಸಾರಿಗೆ ಪೊಲೀಸ್ ಠಾಣೆ ಅಗತ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜನಸಂಚಾರ ಮತ್ತು ವಾಹನ ದಟ್ಟಣೆಗೆ ಅನುಗುಣವಾಗಿ ಬೆಟಗೇರಿಗೆ ಸಾರಿಗೆ ಪೊಲೀಸ್ ಠಾಣೆ ಮಂಜೂರು ಮಾಡಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಲಾಗಿದೆ.
ಈ ಒತ್ತಾಯಕ್ಕೆ ಆರ್.ಎಲ್. ಮೇಳೆನ್ನವರ, ಮಹಾದೇವ ಚಲವಾದಿ, ಗುರುಮೂರ್ತಿ ಚಲವಾದಿ, ಬೂದಪ್ಪ ಹುಣಸೀಮರದ ಸೇರಿದಂತೆ ಸ್ಥಳೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.



