ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜನರು ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರ ಕಂಪನಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಚೆನ್ನೈ ಮೂಲದ ಎಎಸ್‌ಆರ್ ಟ್ರೇಡರ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣದ ಭಾಗವಾಗಿ ಹಳೆಯ ಕಟ್ಟಡ ತೆರವುಗೊಳಿಸುವ ಕಾರ್ಯವನ್ನು ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆ ಪಡೆದ ಎಎಸ್‌ಆರ್ ಟ್ರೇಡರ್ಸ್ ಕಂಪನಿ ನಿರ್ಲಕ್ಷ್ಯ ತೋರಿದ್ದು, ಕಟ್ಟಡ ತೆರವು ನಂತರ ಉಳಿದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ಸ್ಥಳದಲ್ಲೇ ಬಿಟ್ಟು ಹೋಗಿರುವುದೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಲಾಗಿದೆ.
ಘಟನೆಯ ತನಿಖೆಗೆ ಸರ್ಕಾರದಿಂದ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ನಡುವೆ ತ್ಯಾಜ್ಯ ತೆರವುಗೊಳಿಸದ ಹಾಗೂ ನಿಯಮ ಉಲ್ಲಂಘನೆಯ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರವು ಎಎಸ್‌ಆರ್ ಟ್ರೇಡರ್ಸ್ ಕಂಪನಿಗೆ ಇಮೇಲ್ ಮೂಲಕ ನೋಟಿಸ್ ಜಾರಿ ಮಾಡಿತ್ತು. ಮೇ 18ರೊಳಗೆ ಲಿಖಿತ ಸ್ಪಷ್ಟೀಕರಣ ನೀಡುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ಗಡುವು ನೀಡಿದ್ದರೂ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದ್ದು, ಅದರಂತೆ ದೂರು ದಾಖಲಿಸಲಾಗಿದೆ. ಸದ್ಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಿತ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದಾರೆ.



