ಮೈಸೂರು: ದೇವೇಗೌಡರಿಂದ ತೆರವಾಗುವ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ಹೋಗುವ ಆಸೆ ಇರುವ ಬಗ್ಗೆ ಈಗಾಗಲೇ ಬಿಜೆಪಿ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ನಾನು ಚುನಾವಣಾ ರಾಜಕಾರಣದಿಂದ ಈಗಾಗಲೇ ನಿವೃತ್ತಿಯಾಗಿದ್ದೇನೆ. ಆದರೆ ಪಕ್ಷ ಯಾವ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ರಾಜ್ಯಸಭೆ ಸದಸ್ಯತ್ವದ ಕುರಿತು ಪಕ್ಷದ ವರಿಷ್ಠರಿಗೆ ತಮ್ಮ ಆಸೆಯನ್ನು ತಿಳಿಸಿರುವುದಾಗಿ ಹೇಳಿದ ಸದಾನಂದ ಗೌಡ, ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ನಾವು ತೀರ್ಮಾನಿಸುವುದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಅವಧಿ ಪೂರ್ಣಗೊಂಡ ಬಳಿಕ ಅಗತ್ಯವಿದ್ದರೆ ಪಕ್ಷದ ವರಿಷ್ಠರು ಸೂಕ್ತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವೇನೂ ಇಲ್ಲ ಎಂದು ಸದಾನಂದ ಗೌಡ ಹೇಳಿದರು.



