ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಫಾರ್ಮ್ ಮುಂದುವರಿಸಿದರೆ ಈ ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೀಗ್ ಹಂತದ ಕೊನೆಯ ಪಂದ್ಯದ ಬಳಿಕ ಮಾತನಾಡಿದ ಅಕ್ಷರ್ ಪಟೇಲ್, “ಟಾಪ್ ಆರ್ಡರ್‌ನಲ್ಲಿರುವ ಆಟಗಾರರೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಈ ಟೂರ್ನಿಯ ಅತ್ಯಂತ ಬಲಿಷ್ಠ ತಂಡವನ್ನಾಗಿ ಮಾಡಿದ್ದಾರೆ. ಪ್ಲೇಆಫ್‌ನಲ್ಲಿ ಆ ಮೂವರು ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರೆ ಎಸ್‌ಆರ್‌ಎಚ್ ಚಾಂಪಿಯನ್ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಹೈದರಾಬಾದ್ ತಂಡದ ಹೆನ್ರಿಕ್ ಕ್ಲಾಸೆನ್, ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಈ ಸೀಸನ್‌ನಲ್ಲಿ ತಲಾ 500ಕ್ಕೂ ಹೆಚ್ಚು ರನ್ ಗಳಿಸಿರುವುದನ್ನು ಉಲ್ಲೇಖಿಸಿದ ಅವರು, ಮುಂದಿನ ಪಂದ್ಯಗಳಲ್ಲಿಯೂ ಇವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೇಬಲ್ ಟಾಪರ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್‌ಗಳ ಭರ್ಜರಿ ಜಯ ದಾಖಲಿಸಿ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ.
ಲೀಗ್ ಹಂತದಲ್ಲಿ ಎಸ್‌ಆರ್‌ಎಚ್ ಒಟ್ಟು 9 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋಲು ಕಂಡು 18 ಅಂಕಗಳನ್ನು ಗಳಿಸಿದೆ. ಆದರೆ ಆರ್‌ಸಿಬಿ ಹಾಗೂ ಗುಜರಾತ್ ಟೈಟನ್ಸ್‌ಗಿಂತ ಕಡಿಮೆ ನೆಟ್ ರನ್‌ರೇಟ್ ಹೊಂದಿರುವ ಕಾರಣ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮೇ 26ರಂದು ಕ್ವಾಲಿಫೈಯರ್-1 ಪಂದ್ಯ ನಡೆಯಲಿದ್ದು, ಮೇ 27ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಮೇ 29ರಂದು ಕ್ವಾಲಿಫೈಯರ್-2 ಪಂದ್ಯ ನಡೆಯಲಿದ್ದು, ಮೇ 31ರಂದು ಐಪಿಎಲ್ 2026ರ ಫೈನಲ್ ಪಂದ್ಯ ನಡೆಯಲಿದೆ.

