ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದರಗಳನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿರುವ ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್, ಇಂಧನ ದರ ಏರಿಕೆಯಿಂದ ಸಾಮಾನ್ಯ ಜನತೆ, ರೈತರು, ಕಾರ್ಮಿಕರು, ಸಾರಿಗೆ ಕ್ಷೇತ್ರ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಭಾರೀ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಆರೋಪಿಸಿದರು.
ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹಲವು ಬಾರಿ ಹೆಚ್ಚಿಸಲಾಗಿದ್ದು, ಅನೇಕ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹7 ಕ್ಕೂ ಹೆಚ್ಚು ಹಾಗೂ ಡೀಸೆಲ್ ದರ ₹7.50 ರವರೆಗೆ ಏರಿಕೆಯಾಗಿದೆ. ಇತ್ತೀಚಿನ ಹೆಚ್ಚಳದಲ್ಲೇ ಪೆಟ್ರೋಲ್ ₹2.61 ಹಾಗೂ ಡೀಸೆಲ್ ₹2.71 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ಹಾಗೂ ಗೃಹ ಬಳಕೆಯ LPG ಸಿಲಿಂಡರ್ ದರಗಳ ಏರಿಕೆಯಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಜನರಿಗೆ ಅದರ ಪ್ರಯೋಜನ ತಲುಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ, ಕೃಷಿ ವೆಚ್ಚ, ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ರೈತರು, ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರದ ಅಬಕಾರಿ ಸುಂಕ ಮತ್ತು ರಾಜ್ಯದ VAT ತೆರಿಗೆ ಕಡಿತಗೊಳಿಸಬೇಕು. ಗೃಹ ಹಾಗೂ ವಾಣಿಜ್ಯ LPG ಸಿಲಿಂಡರ್ ದರ ಇಳಿಸಿ ಜನರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಶಕ್ತಿಗಳು ಹಾಗೂ ನಾಗರಿಕ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ವೆಲ್ಫೇರ್ ಪಾರ್ಟಿ ಕರೆ ನೀಡಿದೆ.
“ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ನಿರಂತರ ಏರಿಕೆ ಸಾಮಾನ್ಯ ಜನರ ಮೇಲಿನ ಆರ್ಥಿಕ ಶೋಷಣೆಯಾಗಿದೆ”ತಾಹೇರ್ ಹುಸೇನ್ರಾಜ್ಯಾಧ್ಯಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕ



