19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಲೀಗ್ ಹಂತದ 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಪ್ಲೇಆಫ್ ಹಂತ ಆರಂಭವಾಗಿದೆ.
ಇಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.
ಕ್ವಾಲಿಫೈಯರ್-1 ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡಕ್ಕೆ ಇನ್ನೂ ಒಂದು ಅವಕಾಶ ಸಿಗಲಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ಜಯಶಾಲಿಯಾದ ತಂಡದ ವಿರುದ್ಧ ಕ್ವಾಲಿಫೈಯರ್-2 ಆಡಬೇಕಾಗುತ್ತದೆ.
ಈ ಬಾರಿಯ ಪ್ಲೇಆಫ್‌ನಲ್ಲಿ ಕಳೆದ 8 ವರ್ಷಗಳ ಇತಿಹಾಸವೂ ಮಹತ್ವ ಪಡೆದುಕೊಂಡಿದ್ದು, ಕ್ವಾಲಿಫೈಯರ್-1 ಗೆದ್ದ ತಂಡವೇ ಬಹುತೇಕ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ವಿಶೇಷವಾಗಿದೆ. ಇದರಿಂದ ಇಂದಿನ ಪಂದ್ಯಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಶಾಲಾ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದ್ದು, ಹೆಚ್ಚಿನ ಸ್ಕೋರ್ ಪಂದ್ಯ ನಿರೀಕ್ಷಿಸಲಾಗಿದೆ. 200 ರಿಂದ 220 ರನ್ ಗುರಿ ಸುರಕ್ಷಿತ ಎಂದು ವಿಶ್ಲೇಷಕರು ಹೇಳಿದ್ದಾರೆ. ಇಬ್ಬನಿ ಪರಿಣಾಮದಿಂದ ಚೇಸಿಂಗ್ ಮಾಡುವ ತಂಡಕ್ಕೂ ಲಾಭವಾಗುವ ಸಾಧ್ಯತೆ ಇದೆ. ಟಾಸ್ ಕೂಡ ಮಹತ್ವದ ಪಾತ್ರ ವಹಿಸಲಿದೆ.
RCB ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ಟಿಂ ಡೇವಿಡ್ ಹಾಗೂ ಜಿತೇಶ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಪ್ರಮುಖ ಶಕ್ತಿಯಾಗಿದ್ದಾರೆ.
ಇತ್ತ ಗುಜರಾತ್ ಟೈಟಾನ್ಸ್ ತಂಡದಲ್ಲಿ ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ರಶೀದ್ ಖಾನ್, ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಬಲಿಷ್ಠ ಆಟಗಾರರು ತಂಡದ ಆಧಾರವಾಗಿದ್ದಾರೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.



