ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವ ವ್ಯಕ್ತಿಯಲ್ಲ. ಅವರು ಹೈಕಮಾಂಡ್‌ಗೆ ಸಂಪೂರ್ಣ ನಿಷ್ಠೆಯಿಂದಿರುವ ನಾಯಕ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಚರ್ಚೆಗೆ ಕರೆದಿರುವ ಹಿನ್ನೆಲೆಯಲ್ಲಿ ಮಹತ್ವದ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಪಕ್ಷದೊಳಗಿನ ಗೊಂದಲಗಳಿಗೆ ಶೀಘ್ರ ಅಂತ್ಯವಾಗಬೇಕು. ಎಲ್ಲವೂ ಸ್ಪಷ್ಟವಾಗಬೇಕು. ಈ ವಿಚಾರಕ್ಕೆ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೆಲ ಆಪ್ತ ಸಚಿವರು ದೆಹಲಿಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, “ಡಿ.ಕೆ. ಶಿವಕುಮಾರ್ ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವವರಲ್ಲ. ಅವರು ಯಾವಾಗಲೂ ಹೈಕಮಾಂಡ್‌ಗೆ ಬದ್ಧರಾಗಿರುವವರು” ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯಾರನ್ನೂ ವಿಶೇಷವಾಗಿ ಕರೆದುಕೊಂಡು ಹೋಗಿಲ್ಲ. ರಾಜಕೀಯ ಕುತೂಹಲದಿಂದ ಕೆಲ ಸಚಿವರು ಸ್ವಯಂಪ್ರೇರಿತವಾಗಿ ಹೋಗಿರಬಹುದು. ಈ ಹಿಂದೆ ಸಹ ಸಿಎಂ ದೆಹಲಿಗೆ ತೆರಳಿದಾಗ ಸಚಿವರು ಜೊತೆಯಾಗಿರುವ ಉದಾಹರಣೆಗಳಿವೆ. ಇದು ಹೊಸ ಬೆಳವಣಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
“ಪಕ್ಷದೊಳಗಿನ ಗೊಂದಲಗಳು ನಿವಾರಣೆಯಾದರೆ 2028ರ ವಿಧಾನಸಭಾ ಚುನಾವಣೆಗೆ ಅನುಕೂಲವಾಗಲಿದೆ. ನಮಗೆ ಮುಂದಿನ ಚುನಾವಣೆ ಮುಖ್ಯ. ಆದರೆ ನಾವು ಮಾತನಾಡಿದ ಕೂಡಲೇ ಏನೂ ಆಗುವುದಿಲ್ಲ. ಅನಗತ್ಯ ಗೊಂದಲ ಸೃಷ್ಟಿಯಾಗಬಾರದು. ಹೈಕಮಾಂಡ್‌ಗೆ ಎಲ್ಲ ವಿಚಾರಗಳೂ ಗೊತ್ತಿವೆ. ಅಂತಿಮವಾಗಿ ಅವರ ತೀರ್ಮಾನವೇ ಪಕ್ಷಕ್ಕೆ ಮಾನ್ಯ” ಎಂದು ಬಾಲಕೃಷ್ಣ ಹೇಳಿದರು.



