ಮಂಡ್ಯ: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಯಾರು ಏನೇ ಮಾಡಿದರೂ ಮೇಕೆದಾಟು ಡ್ಯಾಂ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, “ಮೇಕೆದಾಟು ಯೋಜನೆಯ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಸುಪ್ರೀಂಕೋರ್ಟ್ ಕೂಡ ಕಾವೇರಿ ಬೋರ್ಡ್ ಮೂಲಕ ವಿಷಯ ಬಗೆಹರಿಸಿಕೊಳ್ಳಿ ಎಂದು ಹೇಳಿದೆ. ಕಾನೂನು ಪ್ರಕ್ರಿಯೆ ನಮ್ಮ ಪರವಾಗಿಯೇ ಸಾಗುತ್ತಿದೆ” ಎಂದರು.
“ತಮಿಳುನಾಡಿಗೆ ನೀಡಬೇಕಾದ ನೀರನ್ನು ಕರ್ನಾಟಕ ಈಗಾಗಲೇ ನೀಡುತ್ತಿದೆ. ನಮ್ಮ ರಾಜ್ಯದ ಗಡಿಯಲ್ಲಿ ನಿರ್ಮಾಣವಾಗುವ ಡ್ಯಾಂ ಬಗ್ಗೆ ತಡೆಯೊಡ್ಡುವ ಹಕ್ಕು ಯಾರಿಗೂ ಇಲ್ಲ” ಎಂದು ಅವರು ತಿರುಗೇಟು ನೀಡಿದರು.
ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಕಳಸ-ಬಂಡೂರಿ ಯೋಜನೆಗೂ ಬಿಜೆಪಿ ಸರ್ಕಾರವೇ ಅಡ್ಡಿಯಾಗಿದೆ. ಗೋವಾದಲ್ಲೂ ಅವರ ಸರ್ಕಾರವೇ ಇದೆ. ಆದರೂ ಸಮಸ್ಯೆ ಬಗೆಹರಿಸಿಲ್ಲ” ಎಂದು ಆರೋಪಿಸಿದರು.
ಒಟ್ಟಾರೆಯಾಗಿ ಮೇಕೆದಾಟು ಯೋಜನೆ ಮತ್ತೆ ಕರ್ನಾಟಕ-ತಮಿಳುನಾಡು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಎರಡೂ ರಾಜ್ಯಗಳ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ.



