‘ಪೆದ್ದಿ’ ಚಿತ್ರದ ಮೂಲಕ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿರುವ ಬಾಲಿವುಡ್ ನಟಿ ಜಾನ್ಹವಿ ಕಪೂರ್, ಶಿವಣ್ಣನ ನಟನಾ ಶೈಲಿ ಹಾಗೂ ಕಣ್ಣಿನ ಎಕ್ಸ್‌ಪ್ರೆಶನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರುದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ಹವಿ, “ಶಿವರಾಜ್ ಕುಮಾರ್ ಸರ್ ಜೊತೆ ನನಗೆ ಒಂದು ಸೀನ್ ಮಾತ್ರ ಇತ್ತು. ಆದರೆ ಆ ಒಂದು ಸೀನ್ನಲ್ಲೇ ಅವರು ಎಷ್ಟು ಅದ್ಭುತ ನಟ ಅನ್ನೋದು ಗೊತ್ತಾಯ್ತು. ಅವರ ಕಣ್ಣುಗಳಲ್ಲೇ ಪವರ್ ಇದೆ. ಅವರು ಡೈಲಾಗ್ ಹೇಳೋದಕ್ಕಿಂತ ಕಣ್ಣಿನಿಂದಲೇ ಸೀನ್ ಹಿಡಿದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಇನ್ನೂ ಅವರ ಜೊತೆ ಹೆಚ್ಚು ನಟಿಸುವ ಅವಕಾಶ ಸಿಗಲಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ ಜಾನ್ಹವಿ, “ಭವಿಷ್ಯದಲ್ಲಿ ಮತ್ತೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಗಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜಾನ್ಹವಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಚಪ್ಪಾಳೆಗಳ ನಡುವೆ ಅವರು ಕನ್ನಡದಲ್ಲಿ ಮಾತು ಆರಂಭಿಸಿದ್ದು ಗಮನ ಸೆಳೆಯಿತು.
‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಶಿವರಾಜ್ ಕುಮಾರ್ ಗೌಡ ನಾಯ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ದಿವ್ಯೇಂದು ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದ್ದು, ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.



