ಚೆನ್ನೈ: ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದೆ. ಕರ್ನಾಟಕ ಸರ್ಕಾರ ಶೀಘ್ರವೇ ಭೂಮಿ ಪೂಜೆ ನಡೆಸಲಿದೆ ಎಂಬ ಘೋಷಣೆ ಹೊರಬಿದ್ದ ತಕ್ಷಣ, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಲರ್ಟ್ ಆಗಿದ್ದು, ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆ ತಡೆಯಲು ಒತ್ತಡ ಹೇರಿದ್ದಾರೆ.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಮೇಕೆದಾಟು ಜಲಾಶಯ ಯೋಜನೆ ತಮಿಳುನಾಡಿನ ರೈತರ ಹಿತಾಸಕ್ತಿಗೆ ದೊಡ್ಡ ಹೊಡೆತವಾಗಲಿದೆ ಎಂದು ವಿಜಯ್ ಎಚ್ಚರಿಸಿದ್ದಾರೆ. ಕರ್ನಾಟಕ ಸರ್ಕಾರದ ಇತ್ತೀಚಿನ ಹೇಳಿಕೆಗಳು ಮತ್ತು ಯೋಜನೆ ಮುಂದೂಡುವ ಪ್ರಯತ್ನಗಳು ರಾಜ್ಯದ ರೈತರಲ್ಲಿ ಭಾರೀ ಆತಂಕ ಸೃಷ್ಟಿಸಿವೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಒಪ್ಪಿಗೆ ಪಡೆಯದೆ ಯಾವುದೇ ಕಾಮಗಾರಿಗೆ ಚಾಲನೆ ನೀಡಬಾರದು ಎಂದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ವಿಜಯ್ ಆಗ್ರಹಿಸಿದ್ದಾರೆ. ಜೊತೆಗೆ, ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ತಕ್ಷಣವೇ ತಿರಸ್ಕರಿಸುವಂತೆ ಕೇಂದ್ರ ಜಲ ಆಯೋಗ ಮತ್ತು ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಭೂಮಿ ಪೂಜೆ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯ್ ಕಾನೂನು ಹಾಗೂ ರಾಜಕೀಯ ಹೋರಾಟವನ್ನು ತೀವ್ರಗೊಳಿಸಿರುವುದು, ಕಾವೇರಿ ವಿವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಸ್ವರೂಪ ಪಡೆಯುವ ಸೂಚನೆ ನೀಡುತ್ತಿದೆ.



