ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಹಾಗೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.
ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದರೂ, ಕೆಲವೆಡೆ ಮಳೆ ಅವಾಂತರಕ್ಕೂ ಕಾರಣವಾಗಿದೆ.
ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ಹಾಗೂ ಬಾಬಾಬುಡನ್ ಗಿರಿ ಭಾಗಗಳಲ್ಲಿ ಕಳೆದ ಅರ್ಧ ಗಂಟೆಯಿಂದ ಭಾರಿ ಮಳೆಯಾಗಿದ್ದು, ಗುಡ್ಡ ಪ್ರದೇಶಗಳಿಂದ ದೊಡ್ಡ ಪ್ರಮಾಣದ ನೀರು ಹರಿದು ಬಂದಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗಿತ್ತು.
ನಗರ ಭಾಗದಲ್ಲಿಯೂ ಮಳೆಯ ಪರಿಣಾಮ ಗಂಭೀರವಾಗಿದ್ದು, ಹಳೆ ಉಪ್ಪಳ್ಳಿ ಮತ್ತು ಗೌರಿ ಕಾಲುವೆ ಬಡಾವಣೆಯ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ರಾಜಕಾಲುವೆಗಳ ಅವ್ಯವಸ್ಥೆಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಟ ನಡೆಸಿದ್ದಾರೆ. ಮನೆಯಲ್ಲಿದ್ದ ಅಗತ್ಯ ವಸ್ತುಗಳು ಮತ್ತು ಬಟ್ಟೆಗಳು ನೀರುಪಾಲಾದ ಘಟನೆಗಳು ವರದಿಯಾಗಿವೆ.
ಇದೇ ವೇಳೆ ಹೆಬ್ಬಳ್ಳಿ ಬಳಿ ಗಾಳಿಗೆ ಬೃಹತ್ ಮರ ರಸ್ತೆ ಮೇಲೆ ಉರುಳಿ ಬಿದ್ದಿದ್ದು, ಚಿಕ್ಕಮಗಳೂರು–ಶಾಂತವೇರಿ ಹಾಗೂ ಲಿಂಗದಹಳ್ಳಿ ಮಾರ್ಗದಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿಕ್ಕಮಗಳೂರು–ತರೀಕೆರೆ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿವೆ.
ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಸಂಚಾರವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ.



