‘ಗಬ್ಬರ್ ಸಿಂಗ್’ ಖ್ಯಾತಿಯ ನಟ ಅಭಿಮನ್ಯು ಸಿಂಗ್, ದಳಪತಿ ವಿಜಯ್ ನಟನೆಯ ‘ವೇಲಾಯುಧಂ’ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಚಲಿಸುವ ರೈಲಿನ ಮೇಲೆ ನಡೆದ ಸಾಹಸ ದೃಶ್ಯ ವೇಳೆ ತಾವು ಮತ್ತು ವಿಜಯ್ ಸಾವಿನ ಅಂಚಿಗೆ ಹೋಗಿದ್ದೆವು ಎಂದು ಹೇಳಿದ್ದಾರೆ.
ಕೊಯಮತ್ತೂರಿನ ಸಮೀಪದ ಸಣ್ಣ ರೈಲು ನಿಲ್ದಾಣದಲ್ಲಿ ಈ ಆ್ಯಕ್ಷನ್ ಸೀನ್ ಚಿತ್ರೀಕರಣ ನಡೆದಿತ್ತು. ವಿಶೇಷ ರೈಲಿನ ಮೇಲೆ ವಿಜಯ್ ಮತ್ತು ಅಭಿಮನ್ಯು ಸಿಂಗ್ ಫೈಟ್ ಮಾಡುವ ದೃಶ್ಯಕ್ಕಾಗಿ ದೊಡ್ಡ ಮಟ್ಟದ ಸಿದ್ಧತೆ ಮಾಡಲಾಗಿತ್ತು. ಆದರೆ ರೈಲು ವೇಗ ಪಡೆಯುತ್ತಿದ್ದಂತೆ ಪರಿಸ್ಥಿತಿ ಅಪಾಯಕಾರಿ ತಿರುವು ಪಡೆದುಕೊಂಡಿತು.
‘ರೈಲು 70-80 ಕಿಲೋಮೀಟರ್ ವೇಗದಲ್ಲಿ ಓಡುತ್ತಿತ್ತು. ಆ ವೇಗದಲ್ಲಿ ರೈಲಿನ ಮೇಲೆಯೇ ಫೈಟ್ ಮಾಡಬೇಕಿತ್ತು. ಮುಂದೆ ಭಾರೀ ಎತ್ತರದ ರೈಲ್ವೆ ಸೇತುವೆ ಕಾಣುತ್ತಿದ್ದಂತೆ ನನ್ನ ಕಾಲೇ ನಡುಗಿತ್ತು. ಒಂದು ತಪ್ಪು ಹೆಜ್ಜೆ ಇಟ್ಟಿದ್ದರೆ ನೇರವಾಗಿ ಆಳವಾದ ಕಣಿವೆಗೆ ಬೀಳಬೇಕಾಗಿತ್ತು’ ಎಂದು ಅಭಿಮನ್ಯು ಸಿಂಗ್ ಹೇಳಿದ್ದಾರೆ.
ಈ ವೇಳೆ ವಿಜಯ್ ತುಂಬಾ ಕೂಲ್ ಆಗಿ ವರ್ತಿಸಿದ್ದರು. ‘ಭಯಪಡಬೇಡಿ, ನಾವು ಒಬ್ಬರನ್ನೊಬ್ಬರು ಕಾಪಾಡಿಕೊಳ್ಳುತ್ತೇವೆ’ ಎಂದು ಧೈರ್ಯ ತುಂಬಿದ್ದರು ಎಂದು ಅವರು ತಿಳಿಸಿದ್ದಾರೆ.
ಅಂತಿಮವಾಗಿ ಯಾವುದೇ ಅನಾಹುತವಿಲ್ಲದೆ ಶೂಟಿಂಗ್ ಮುಗಿದರೂ, ಆ ದಿನದ ಅನುಭವ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಭಯಾನಕ ಕ್ಷಣವಾಗಿ ಉಳಿದಿದೆ ಎಂದು ಅಭಿಮನ್ಯು ಸಿಂಗ್ ಹೇಳಿದ್ದಾರೆ.



