ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ವಿಶೇಷ ಹಂತವಾಗಿದ್ದರೂ, ಈ ಸಮಯದಲ್ಲಿ ದೇಹದಲ್ಲಿ ಹಲವಾರು ಹಾರ್ಮೋನಲ್ ಹಾಗೂ ಶಾರೀರಿಕ ಬದಲಾವಣೆಗಳು ಸಂಭವಿಸುತ್ತವೆ. ಇದರಲ್ಲಿ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ ಕೂಡ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸರ್ ಗಂಗಾರಾಮ್ ಆಸ್ಪತ್ರೆಯ ತಜ್ಞೆ ಡಾ. ಆಭಾ ಮಜುಂದಾರ್ ಅವರ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ರೊಜೆಸ್ಟೆರೋನ್ ಹಾರ್ಮೋನ್ ಪ್ರಮಾಣ ಹೆಚ್ಚಾಗುವುದರಿಂದ ಯೂರಿನರಿ ಸಿಸ್ಟಂ ಸಡಿಲಗೊಳ್ಳುತ್ತದೆ. ಇದರಿಂದ ಮೂತ್ರವು ಸಂಪೂರ್ಣವಾಗಿ ಹೊರಬರದೇ ಉಳಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ ಗರ್ಭಾಶಯದ ಗಾತ್ರ ಹೆಚ್ಚಾದಂತೆ ಮೂತ್ರ ಮಾರ್ಗದ ಮೇಲೆ ಒತ್ತಡ ಉಂಟಾಗಿ ಮೂತ್ರದ ಹರಿವು ನಿಧಾನಗೊಳ್ಳುತ್ತದೆ.
ಅದರ ಜೊತೆಗೆ ಗರ್ಭಿಣಿಯರ ಮೂತ್ರದಲ್ಲಿ ಸಕ್ಕರೆ ಮತ್ತು ಅಮಿನೋ ಆಮ್ಲಗಳ ಪ್ರಮಾಣ ಸ್ವಲ್ಪ ಹೆಚ್ಚಾಗುವುದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಯೂರಿನ್ ಇನ್ಫೆಕ್ಷನ್ ಅಪಾಯ ಹೆಚ್ಚುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಯೂರಿನ್ ಇನ್ಫೆಕ್ಷನ್ ಲಕ್ಷಣಗಳು:
- ಮೂತ್ರ ವಿಸರ್ಜನೆ ವೇಳೆ ಉರಿ ಅಥವಾ ನೋವು
- ಪದೇಪದೇ ಮೂತ್ರ ಬರುವುದು
- ಹೊಟ್ಟೆ ಕೆಳಭಾಗ ಮತ್ತು ಬೆನ್ನು ನೋವು
- ಗಾಢ ಹಳದಿ ಬಣ್ಣದ ಮೂತ್ರ
- ದುರ್ವಾಸನೆ
- ಕೆಲವೊಮ್ಮೆ ಜ್ವರ ಅಥವಾ ನಡುಕ
ಮುನ್ನೆಚ್ಚರಿಕೆ ಕ್ರಮಗಳು:
- ಹೆಚ್ಚು ನೀರು ಕುಡಿಯುವುದು
- ನೀರಿನಾಂಶ ಹೆಚ್ಚಿರುವ ಹಣ್ಣುಗಳ ಸೇವನೆ
- ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು
- ಸಕ್ಕರೆ ಹಾಗೂ ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು
- ಮೂತ್ರವನ್ನು ತಡೆಹಿಡಿಯಬಾರದು
- ಹತ್ತಿಯ ಬಟ್ಟೆ ಧರಿಸುವುದು
ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಯೂರಿನ್ ಇನ್ಫೆಕ್ಷನ್ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.



