ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಹತ್ವದ ಸಭೆ ನಡೆಯಿತು.
ಭಾರತ ಚುನಾವಣಾ ಆಯೋಗವು 14-05-2026ರಂದು ಹೊರಡಿಸಿದ ಮಾರ್ಗಸೂಚಿಗಳ ಅನ್ವಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅದರ ಪೂರ್ವ ತಯಾರಿ ಹಾಗೂ ಸಮಗ್ರ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ನೀಡುವ ಉದ್ದೇಶದಿಂದ ಸಭೆ ಆಯೋಜಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾ ತಹಶೀಲ್ದಾರರು, ಮತದಾರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರ ನೋಂದಣಾಧಿಕಾರಿಗಳ ವಿವರಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 967 ಮತಗಟ್ಟೆಗಳಿದ್ದು, 4,48,794 ಪುರುಷ ಮತದಾರರು, 4,56,352 ಮಹಿಳಾ ಮತದಾರರು ಹಾಗೂ 60 ತೃತೀಯಲಿಂಗಿ ಮತದಾರರು ಸೇರಿ ಒಟ್ಟು 9,05,206 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ರತಿ ಮತಗಟ್ಟೆಗೆ ಒಬ್ಬರಂತೆ 967 ಬಿ.ಎಲ್.ಓಗಳು ಹಾಗೂ ಪ್ರತಿ 10 ಬಿ.ಎಲ್.ಓಗಳಿಗೆ ಒಬ್ಬರಂತೆ 97 ಬಿ.ಎಲ್.ಓ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. 2002ರ ಮತದಾರರ ಪಟ್ಟಿಗೆ 2025ರ ಮತದಾರರನ್ನು ಮ್ಯಾಪಿಂಗ್ ಮಾಡುವ ಕಾರ್ಯದಲ್ಲಿ ಈಗಾಗಲೇ 8,26,953 ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದ್ದು, ಶೇ.91.36ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ 967 ಮತಗಟ್ಟೆಗಳಿಗೆ ಬೂತ್ ಲೆವೆಲ್ ಏಜೆಂಟ್ಗಳ (BLA) ನೇಮಕ ಮಾಡಿ ಪಟ್ಟಿ ಸಲ್ಲಿಸುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಯಿತು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬಿ.ಎಲ್.ಓಗಳು, ಸಹಾಯಕ ಮತದಾರ ನೋಂದಣಾಧಿಕಾರಿಗಳು ಹಾಗೂ ಮತದಾರ ನೋಂದಣಾಧಿಕಾರಿಗಳೊಂದಿಗೆ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಚುನಾವಣಾ ತಹಶೀಲ್ದಾರರು, ಸಹಾಯಕ ಮತದಾರ ನೋಂದಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



