ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿನ ಮಾರುತಿ ದೇವಸ್ಥಾನದ ಆವರಣದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಸೈಬರ್ ಅಪರಾಧ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಲಕ್ಕುಂಡಿ ಬೀಟ್ ಪೊಲೀಸ್ ಪೇದೆ ಪ್ರವೀಣ ಶಾಂತಪ್ಪನವರ ರೈತರು ಹಾಗೂ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.
ರೈತರು ಪರಿಚಯವಿಲ್ಲದ ಖರೀದಿದಾರರಿಗೆ ಕೃಷಿ ದಾಸ್ತಾನು ಮಾರಬಾರದು. ಸರ್ಕಾರದ ಮಾನ್ಯತೆ ಹೊಂದಿರುವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಸರಿಯಾದ ಬೆಲೆ ಪಡೆಯಬೇಕು ಎಂದು ಸಲಹೆ ನೀಡಿದರು.
ಆನ್‌ಲೈನ್ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಹಾಗೂ ಮೊಬೈಲ್‌ಗೆ ಬರುವ OTP ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಸಿದರು. ಮೋಸಕ್ಕೊಳಗಾದರೆ ತಕ್ಷಣವೇ 1930 ಹಾಗೂ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಬಳಸಬೇಕು. ಟ್ರ್ಯಾಕ್ಟರ್ ಟ್ರೈಲರ್‌ಗಳಿಗೆ ರೇಡಿಯಂ ಅಳವಡಿಸುವ ಮೂಲಕ ಅಪಘಾತ ತಡೆಗಟ್ಟಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಎಸ್.ಐ. ವಿ.ಎಸ್. ಭಿಕ್ಷಾವತಿಮಠ ಉಪಸ್ಥಿತರಿದ್ದರು.



