HomeGadag Newsತ್ಯಾಗದ ಮೌಲ್ಯ ಸಾರಿದ ಪವಿತ್ರ ಬಕ್ರೀದ್

ತ್ಯಾಗದ ಮೌಲ್ಯ ಸಾರಿದ ಪವಿತ್ರ ಬಕ್ರೀದ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ತ್ಯಾಗ, ಬಲಿದಾನ, ದಾನ-ಧರ್ಮ ಮತ್ತು ಸಹೋದರತ್ವದ ಮೌಲ್ಯಗಳನ್ನು ಸಾರುವ ಪವಿತ್ರ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಗುರುವಾರ ಬೆಳಿಗ್ಗೆಯೇ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಜಿಲ್ಲೆಯ ಗದಗ, ಲಕ್ಷ್ಮೇಶ್ವರ, ರೋಣ, ಶಿರಹಟ್ಟಿ, ಮುಂಡರಗಿ, ನರಗುಂದ, ಗಜೇಂದ್ರಗಡ, ನರೇಗಲ್ಲ, ಡಂಬಳ, ಲಕ್ಕುಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಹಬ್ಬ ಆಚರಿಸಿದರು. ಈದ್ಗಾ ಮೈದಾನಗಳಲ್ಲಿ ಹಾಗೂ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೇಶದಲ್ಲಿ ಸುಖ, ಶಾಂತಿ, ಸೌಹಾರ್ದತೆ, ಉತ್ತಮ ಮಳೆ ಹಾಗೂ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ರೋಣ ತಾಲೂಕಿನ ಮಾರನಬಸರಿ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದ ಮೌಲಾನ ಮಲೀಕ ಮಾತನಾಡಿ, ಧಾರ್ಮಿಕ ಚಿಂತನೆಯ ಜೊತೆಗೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೂ ಮುಸ್ಲಿಂ ಸಮುದಾಯ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಅಕ್ಷರಜ್ಞಾನ ನೀಡುವುದು ಧರ್ಮದ ಭಾಗವಾಗಿದೆ. ಇಸ್ಲಾಂ ಧರ್ಮವು ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದು, ಮಕ್ಕಳು ವಿದ್ಯಾವಂತರಾದರೆ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಕೆಟ್ಟ ಆಲೋಚನೆಗಳು, ದುಶ್ಚಟಗಳು ಮತ್ತು ಮೋಸ-ವಂಚನೆಗಳಿಂದ ದೂರವಿದ್ದು ಉತ್ತಮ ಮೌಲ್ಯದ ಬದುಕು ಕಟ್ಟಿಕೊಳ್ಳಬೇಕು. ಯುವಕರು ಸಮಾಜಕ್ಕೆ ಉಪಯುಕ್ತ ನಾಗರಿಕರಾಗುವಂತೆ ಶಪಥ ಮಾಡಬೇಕು ಎಂದು ತಿಳಿಸಿದರು.
ರೋಣದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ
ರೋಣ ಪಟ್ಟಣದ ಈದ್ಗಾ ಮೈದಾನದಲ್ಲಿ ಮಳೆ ನೀರು ನಿಂತ ಹಿನ್ನೆಲೆ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ನಿಡಗುಂದಿ, ಕಳಕಾಪುರ, ಇಟಗಿ, ಮುಗುಳಿ, ಕೊತಬಾಳ, ಹಿರೇಹಾಳ, ಸವಡಿ, ಬೆಳವಣಕಿ, ಅಬ್ಬಿಗೇರಿ, ಜಕ್ಕಲಿ, ಬಸರಕೊಡ, ಯರೇಬೇಲೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಕ್ತಿಭಾವದಿಂದ ಬಕ್ರೀದ್ ಆಚರಣೆ ನಡೆಯಿತು.
ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಣೆ
ತ್ಯಾಗ, ಬಲಿದಾನ ಹಾಗೂ ಸಮಾನತೆಯ ಸಂದೇಶ ಸಾರುವ ಪವಿತ್ರ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಲಕ್ಷ್ಮೇಶ್ವರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆ ಹೊಸ ಉಡುಪು ಧರಿಸಿದ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ವಿಶೇಷ ನಮಾಜ್ ಸಲ್ಲಿಸಿದರು. ಬಳಿಕ ಪಟ್ಟಣದ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೇಶದ ಸುಖ, ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಮೌಲಾನಾ ಹಾಪೀಜ್ ಶಕೀಲ್ ಧರ್ಮೋಪದೇಶ ನೀಡಿ, ಎಲ್ಲ ಧರ್ಮಗಳ ಸಾರ ಮನುಷ್ಯತ್ವವೇ ಆಗಿದೆ ಎಂದು ಹೇಳಿದರು.
ಸಮಾಜದಲ್ಲಿನ ಬಡವರು, ಅಶಕ್ತರು ಹಾಗೂ ವಯೋವೃದ್ಧರಿಗೆ ಕೈಲಾದಷ್ಟು ಸಹಾಯ-ಸಹಕಾರ ನೀಡಬೇಕು. ಜಾತಿ-ಭೇದ ಮರೆತು ಎಲ್ಲ ಧರ್ಮೀಯರೊಂದಿಗೆ ಪ್ರೀತಿ, ವಿಶ್ವಾಸ, ಸೌಹಾರ್ದತೆ ಮತ್ತು ಸಮರ್ಪಣಾ ಮನೋಭಾವದಿಂದ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಪ್ರಾರ್ಥನೆ, ವ್ರತಾಚರಣೆ ಮತ್ತು ಧಾರ್ಮಿಕ ಮೌಲ್ಯಗಳು ವ್ಯಕ್ತಿಯನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಜಗತ್ತಿನ ಶಾಂತಿ ಮತ್ತು ನೆಮ್ಮದಿಗಾಗಿ ಎಲ್ಲರೂ ಅಲ್ಲಾನನ್ನು ಪ್ರಾರ್ಥಿಸೋಣ ಎಂದು ತಿಳಿಸಿದರು.
ಈ ವೇಳೆ ಅಂಜುಮನ್ ಹಾಗೂ ಆಸಾರ ಕಮಿಟಿಯ ಪ್ರಮುಖರು, ಸಮಾಜದ ಹಿರಿಯರು, ಯುವಕರು ಮತ್ತು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಬಳಿಕ ಪರಸ್ಪರ ಆಲಿಂಗಿಸಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣ ಸೇರಿದಂತೆ ತಾಲೂಕಿನ ಮಂಜಲಾಪುರ, ಶಿಗ್ಲಿ, ಹುಲ್ಲೂರ, ಸೂರಣಗಿ, ಬಾಲೇಹೊಸೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಮುಸ್ಲಿಂ ಬಾಂಧವರು ಭಕ್ತಿಭಾವದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಲಕ್ಕುಂಡಿಯಲ್ಲಿ ಸಾಮೂಹಿಕ ಪ್ರಾರ್ಥನೆ
ಲಕ್ಕುಂಡಿಯಲ್ಲಿ ಮುಸ್ಲಿಂ ಬಾಂಧವರು ಹಿರೇಮಸೀದಿಯಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಾಫೀಜ್ ಸಲೀಂ ಅವರು ತ್ಯಾಗ, ದಾನ ಹಾಗೂ ಧರ್ಮದ ಮಹತ್ವದ ಕುರಿತು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಜಮಾತ್ (ಆಡಳಿತ) ಅಂಜುಮನ್-ಎ-ಇಸ್ಲಾಂ ಕಮಿಟಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಿಯಾಜ್ ಕದಡಿ, ರಾಜಾಭಕ್ಷಿ ಮಾಲ್ದಾರ, ಮಿರಾಜಖಾನ್ ಮಸೂತಿಮನಿ ಹಾಗೂ ಜಂದಿಸಾಬ ಗುಂಗಳಕರ್ ಅವರನ್ನು ಸನ್ಮಾನಿಸಲಾಯಿತು.
ಡಂಬಳದಲ್ಲಿ ರೈತರ ಒಳಿತಿಗೆ ವಿಶೇಷ ದುಆ
ಡಂಬಳ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಧರ್ಮಗುರು ಖಾದರಸಾಬ ಮುಲ್ಲಾ ಧರ್ಮಗ್ರಂಥ ಪಠಿಸಿ ಧರ್ಮ ಸಂದೇಶ ನೀಡಿದರು.
ತ್ಯಾಗ, ದಾನ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿದರು.
ಉತ್ತಮ ಮಳೆ, ರೈತರಿಗೆ ಸಮೃದ್ಧ ಬೆಳೆ, ಯುವಕರಿಗೆ ಆತ್ಮಸ್ಥೈರ್ಯ ಹಾಗೂ ಕಾರ್ಮಿಕರಿಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನರೇಗಲ್ಲದಲ್ಲಿ ಹಬ್ಬದ ಭಕ್ತಿ ವೈಭವ
ನರೇಗಲ್ಲ ಪಟ್ಟಣ ಸೇರಿದಂತೆ ಅಬ್ಬಿಗೇರಿ, ಕೊಚಲಾಪುರ, ತೋಟಗಂಟಿ, ಜಕ್ಕಲಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಹಾಲಕೆರೆ, ಹಾಗೂ ನಿಡಗುಂದಿಕೊಪ್ಪ ಸೇರಿದಂತೆ ಹಲವೆಡೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಜರತ್ ಮಂಜೂರ ಹುಸೇನ ಶಾವಲಿ, ಫಕ್ರುಸಾಬ್ ರೇವಡಿಗಾರ, ಎ.ಎ. ನವಲಗುಂದ, ಅಲ್ಲಾಬಕ್ಷಿ ನದಾಫ್, ಖಾದರಬಾಷಾ ಹೂಲಗೇರಿ, ಕಾಸಿಂ ಗಡಾದ, ನಜೀರ್‌ಸಾಬ್ ಇಟಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.
“ಬಕ್ರೀದ್ ಹಬ್ಬವು ಕೇವಲ ಆಚರಣೆ ಅಲ್ಲ, ಅದು ತ್ಯಾಗ, ದಾನ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಪವಿತ್ರ ಸಂದೇಶವಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜಕ್ಕೆ ಮಾದರಿಯಾಗಬೇಕು”
ಮೌಲಾನ ಮಲೀಕ
ಶಿಕ್ಷಣ ಮತ್ತು ಸಂಸ್ಕಾರಕ್ಕೆ ಆದ್ಯತೆ
ಬಕ್ರೀದ್ ಆಚರಣೆಯಲ್ಲಿ ವಿವಿಧ ಧರ್ಮಗುರುಗಳು ಶಿಕ್ಷಣ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ವಿಶೇಷವಾಗಿ ಒತ್ತಿ ಹೇಳಿದರು. ಇಸ್ಲಾಂ ಧರ್ಮದಲ್ಲಿ ಶಿಕ್ಷಣ, ದಾನ, ಪ್ರಾಮಾಣಿಕ ದುಡಿಮೆ ಹಾಗೂ ಮಾನವೀಯ ಮೌಲ್ಯಗಳಿಗೆ ವಿಶೇಷ ಸ್ಥಾನವಿದ್ದು, ಯುವಪೀಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.
 “ಬಕ್ರೀದ್ ಹಬ್ಬವು ತ್ಯಾಗ, ದಾನ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ”
ಹಾಪೀಜ್ ಶಕೀಲ್, ಮೌಲಾನಾ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!