ವಿಜಯಸಾಕ್ಷಿ ಸುದ್ದಿ, ಮುಳಗುಂದ: ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಪವಿತ್ರ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಮುಳಗುಂದ ತಾಲ್ಲೂಕಿನಾದ್ಯಂತ ಭಕ್ತಿಭಾವ, ಹಾಗೂ ಧಾರ್ಮಿಕ ಶ್ರದ್ಧೆಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೇಶದ ಶಾಂತಿ, ಸಮಾಜದ ಸೌಹಾರ್ದತೆ ಹಾಗೂ ಜನರ ಸುಖ-ಸಮೃದ್ಧಿಗಾಗಿ ವಿಶೇಷ ದುಆ ಮಾಡಿದರು. ಮಸೀದಿಗಳು ಹಾಗೂ ಈದ್ಗಾಗಳಲ್ಲಿ ಭಕ್ತರ ಸಂಭ್ರಮ ಕಳೆಗಟ್ಟಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಊರಿನ ಖಾಜಿ ಜನಾಬ್, ಬಕ್ರೀದ್ ಹಬ್ಬವು ತ್ಯಾಗ, ಸಹನೆ, ಭಕ್ತಿ ಮತ್ತು ಅಲ್ಲಾಹನಿಗೆ ಸಂಪೂರ್ಣ ಸಮರ್ಪಣೆಯ ಸಂದೇಶ ಸಾರುತ್ತದೆ ಎಂದು ಹೇಳಿದರು. ಇಬ್ರಾಹಿಂ (ಅಲೈಹಿಸ್ಸಲಾಂ) ಅವರ ತ್ಯಾಗ ಮತ್ತು ದೇವಭಕ್ತಿಯ ಸ್ಮರಣಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಾಜುದ್ದೀನ್ ಎಂ. ಕಿಂಡ್ರಿ ಮಾತನಾಡಿ, ಬಕ್ರೀದ್ ಹಬ್ಬವು ಮಾನವೀಯತೆ, ಪ್ರೀತಿ, ಹಂಚಿಕೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿದೆ ಎಂದರು.
ಸೃಷ್ಟಿಕರ್ತನು ಎಲ್ಲರ ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಬರಕತ್ ಹಾಗೂ ಯಶಸ್ಸು ಕರುಣಿಸಲಿ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ಭ್ರಾತೃತ್ವ ಮತ್ತಷ್ಟು ಬಲವಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಯುವ ನಾಯಕ ಕೆ.ಎಚ್. ಪಾಟೀಲ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಹಮೀದ್ ಮುಜಾವರ, ಕಾರ್ಯದರ್ಶಿ ಹೈದರ್ ಖವಾಸ್, ಖಜಾಂಚಿ ಮುನ್ನಾ ಢಾಲಾಯತ, ಸದಸ್ಯರಾದ ದಾವಲಸಾಬ ಲಕ್ಷ್ಮೇಶ್ವರ, ದಾವೂದ್ ಜಮಾಲಸಾಬ, ಹಿರಿಯರಾದ ಬುಡ್ಡೆಸಾಬ ಖವಾಸ್, ಮಾಬೂಸಾಬ ಅಬ್ಬುನವರ, ಇಬ್ರಾಹಿಂ ಹಣಗಿ, ರಸೂಲ್ ಚಿಂಚಲಿ, ಹಸನಸಾಬ ಹುಬ್ಬಳ್ಳಿ, ಮಕ್ತುಮ್ ಸಾಬ ನದಾಫ, ಇಮಾಮಸಾಬ್ ಮುಜಾವರ, ನಜೀರ್ ಅಣ್ಣಿಗೇರಿ, ನದ್ದಿಮುಲ್ಲಾ ಸರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
“ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ತ್ಯಾಗ, ಭಕ್ತಿ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಪವಿತ್ರ ಹಬ್ಬವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವ ಇನ್ನಷ್ಟು ಗಟ್ಟಿಯಾಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ”
ತಾಜುದ್ದೀನ್ ಎಂ. ಕಿಂಡ್ರಿ, ಅಧ್ಯಕ್ಷರು, ಅಂಜುಮನ್ ಇಸ್ಲಾಂ ಸಂಸ್ಥೆ,



