ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ..
ಅದರ ಮೊದಲ ಹೆಜ್ಜೆಯಾಗಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಕಳೆದ ಮೂರು ಸೀಸನ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಅವಧಿಯಲ್ಲಿ ಪಾಂಡ್ಯ 38 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ ಕೇವಲ 15 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಉಳಿದ 23 ಪಂದ್ಯಗಳಲ್ಲಿ ಎಂಐ ಸೋಲು ಕಂಡಿದೆ.
ಈ ಲೆಕ್ಕಾಚಾರದಲ್ಲಿ ಹಾರ್ದಿಕ್ ಪಾಂಡ್ಯ ಅವರ ಗೆಲುವಿನ ಶೇಕಡಾವಾರು ಕೇವಲ 39.4% ಮಾತ್ರವಾಗಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವನ್ನು 158 ಪಂದ್ಯಗಳಲ್ಲಿ ಮುನ್ನಡೆಸಿದ್ದ ರೋಹಿತ್ ಶರ್ಮಾ 55.06% ಗೆಲುವಿನ ಸಾಧನೆ ಹೊಂದಿದ್ದರು. ಹೀಗಾಗಿ ಪಾಂಡ್ಯ ನಾಯಕತ್ವದಲ್ಲಿ ತಂಡ ತನ್ನ ಹಳೆಯ ಪ್ರಭಾವ ಕಳೆದುಕೊಂಡಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಇದರಿಂದಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ನಾಯಕತ್ವ ಬದಲಾವಣೆಯತ್ತ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಹೊಸ ನಾಯಕ ಯಾರು ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಹೀಗಾಗಿ ಐಪಿಎಲ್ 2027ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಆಟಗಾರ ಯಾರು ಎಂಬ ಕುತೂಹಲ ಈಗಲೇ ಆರಂಭವಾಗಿದೆ.



