ಚಂಡೀಗಢ: ಐಪಿಎಲ್ 2026ರ ಫೈನಲ್ ಪ್ರವೇಶಕ್ಕಾಗಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 31ರಂದು ನಡೆಯಲಿರುವ ಫೈನಲ್‌ನಲ್ಲಿ ಆರ್ಸಿಬಿ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.
ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ. ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಮಾತ್ರ ಫೈನಲ್‌ಗೆ ಹೆಜ್ಜೆ ಇಡಲಿದೆ.
ಟೂರ್ನಿಯ ಆರಂಭದಲ್ಲಿ ಏರುಪೇರು ಕಂಡಿದ್ದ ಗುಜರಾತ್ ಟೈಟನ್ಸ್, ನಂತರದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ 18 ಅಂಕಗಳೊಂದಿಗೆ ಪ್ಲೇ-ಆಫ್ ಪ್ರವೇಶಿಸಿತ್ತು. ಮತ್ತೊಂದೆಡೆ, ಆರಂಭಿಕ ನಾಲ್ಕು ಪಂದ್ಯಗಳನ್ನು ಗೆದ್ದು ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ಮಧ್ಯದಲ್ಲಿ ಫಾರ್ಮ್ ಕಳೆದುಕೊಂಡರೂ, ಮಹತ್ವದ ಪಂದ್ಯಗಳಲ್ಲಿ ಮತ್ತೆ ಲಯ ಕಂಡುಕೊಂಡಿದೆ.
ಈ ಸೀಸನ್‌ನಲ್ಲಿ ಉಭಯ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿವೆ. ಏಪ್ರಿಲ್ 4ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ರನ್‌ಗಳ ಅಂತರದಲ್ಲಿ ಜಯ ಸಾಧಿಸಿತ್ತು. ಬಳಿಕ ಮೇ 9ರಂದು ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 77 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿತ್ತು.
ಗುಜರಾತ್‌ಗೆ ಬ್ಯಾಟಿಂಗ್-ಬೌಲಿಂಗ್ ಬಲ:
ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಶಕ್ತಿ ಆರಂಭಿಕ ಜೋಡಿಯಾದ ನಾಯಕ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ಜೇಸನ್ ಹೋಲ್ಡರ್ ಹಾಗೂ ರಾಹುಲ್ ತೇವಾಟಿಯಾ ತಂಡಕ್ಕೆ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ರಶೀದ್ ಖಾನ್ ಅವರ ಅನುಭವ ರಾಜಸ್ಥಾನ್ ಬ್ಯಾಟರ್‌ಗಳಿಗೆ ಸವಾಲಾಗಲಿದೆ.
ರಾಜಸ್ಥಾನ್‌ಗೆ ವೈಭವ್ ಸೂರ್ಯವಂಶಿ ಆಸರೆ:
ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದರು. ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಅವರೂ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈಗಾಗಲೇ ಈ ಸೀಸನ್‌ನಲ್ಲಿ 21 ವಿಕೆಟ್ ಪಡೆದು ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆರ್ಚರ್, ಪವರ್‌ಪ್ಲೇನಲ್ಲೇ ಗುಜರಾತ್ ಆರಂಭಿಕರನ್ನು ಕಟ್ಟಿಹಾಕುವ ಜವಾಬ್ದಾರಿ ಹೊತ್ತಿದ್ದಾರೆ.
ಮುಲ್ಲಾನ್ಪುರ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದು, ಮತ್ತೊಮ್ಮೆ ರನ್ ಮಳೆಯ ನಿರೀಕ್ಷೆ ಇದೆ. ಇತ್ತೀಚೆಗೆ ಇದೇ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಸನ್‌ರೈಸರ್ಸ್ ಹೈದರಾಬಾದ್ 196 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಹೈ ಸ್ಕೋರಿಂಗ್ ಕದನ ನಿರೀಕ್ಷಿಸಲಾಗಿದೆ.
ಸಂಭವನೀಯ ತಂಡಗಳು:
ಗುಜರಾತ್ ಟೈಟನ್ಸ್:
ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇಂಪ್ಯಾಕ್ಟ್ ಸಬ್:
ರಾಹುಲ್ ತೇವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್.
ರಾಜಸ್ಥಾನ್ ರಾಯಲ್ಸ್:
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ.
ಇಂಪ್ಯಾಕ್ಟ್ ಸಬ್:
ಶುಭಂ ದುಬೆ, ಸುಶಾಂತ್ ಮಿಶ್ರಾ, ಅಮನ್ ರಾವ್ ಪೆರಾಲ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ.



