ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಮನಗರಕ್ಕೆ ಬಂದರೆ ಕಾಲು ತೊಳೆದು ಸ್ವಾಗತಿಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದರು. “ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ರಾಮನಗರಕ್ಕೆ ಬಂದರೆ ಅವರ ಪಾದ ತೊಳೆದೇ ಸ್ವಾಗತಿಸುತ್ತೇವೆ” ಎಂದು ಕುಟುಕಿದರು.
ನೈಸ್ ರಸ್ತೆ ವಿಚಾರವಾಗಿ ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ವಿರುದ್ಧ ಕಿಡಿಕಾರಿದ ಇಕ್ಬಾಲ್ ಹುಸೇನ್, ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ರಾಜ್ಯದ ಪರ ಕೆಲಸ ಮಾಡಬೇಕು ಹಾಗೂ ರಾಮನಗರ ಜನತೆಯ ಋಣ ತೀರಿಸಬೇಕು ಎಂದರು. ರಾಮನಗರ ಭಾಗಕ್ಕೆ ಬೃಹತ್ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಒದಗಿಸುವ ಆಲೋಚನೆ ಮಾಡಬೇಕಿದ್ದ ಕುಮಾರಸ್ವಾಮಿಗೆ ಅಂತಹ ಅಭಿವೃದ್ಧಿ ಚಿಂತನೆಗಳೇ ಇಲ್ಲ ಎಂದೂ, ಬಿಡದಿ ಮತ್ತು ನೈಸ್ ರಸ್ತೆ ವಿಚಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷದ ಬಳಿ ಬೇರೆ ಅಸ್ತ್ರಗಳಿಲ್ಲ ಎಂದು ಟೀಕಿಸಿದರು. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಹಾಗೂ ಬಿಜೆಪಿಯವರ ವರ್ತನೆಯಿಂದ ನೊಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆಯೇ ಹೊರತು, ಆರೋಪ ಸಾಬೀತಾಗಿದ್ದಕ್ಕಲ್ಲ ಎಂದು ಸಮರ್ಥಿಸಿಕೊಂಡ ಅವರು, ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಈಗಾಗಲೇ ಎಸ್‌ಐಟಿ ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿದ್ದು, ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದರು.



