ಕಾರವಾರ/ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಬಳ್ಳಾರಿಯಿಂದ ಗೋವಾ ಕಡೆಗೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಗೆ ಸೇರಿದ ಖಾಸಗಿ ಲಕ್ಸುರಿ ಬಸ್, ಕಂಚಿನಬಾಗಿಲು (ಅಡ್ಲೂರು) ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ.
ಚಾಲಕನಿಗೆ ನಿದ್ರೆ ತೂಕಡಿಸಿದ ಪರಿಣಾಮ ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ವೇಗವಾಗಿ ಸಂಚರಿಸುತ್ತಿದ್ದ ಬಸ್ ಹೆದ್ದಾರಿಯ ಮಧ್ಯಭಾಗದಲ್ಲೇ ಉರುಳಿಬಿದ್ದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸರತಿ ನಿರ್ಮಾಣವಾಗಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು.
ಗಾಯಗೊಂಡ 21 ಮಂದಿಯನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರಲ್ಲಿ ತಲೆ ಮತ್ತು ಎದೆ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಳಿಕ ಪೊಲೀಸರು ಬೃಹತ್ ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾದ ಬಸ್ಸನ್ನು ಹೆದ್ದಾರಿಯಿಂದ ತೆರವುಗೊಳಿಸಿದರು. ಇದಾದ ನಂತರ ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.



