ರಾಮನಗರ: ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿರುವ ಬೆನ್ನಲ್ಲೇ ರಾಮನಗರ ಜಿಲ್ಲೆಯಲ್ಲಿ ಡಿ.ಕೆ. ಶಿವಕುಮಾರ್ ಪರ ಭರ್ಜರಿ ಸಂಭ್ರಮ ಆರಂಭವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ನಗರದ ಪ್ರಮುಖ ವೃತ್ತಗಳಲ್ಲಿ ಬೃಹತ್ ಕಟೌಟ್‌ಗಳು ಹಾಗೂ ಅಭಿನಂದನಾ ಬ್ಯಾನರ್‌ಗಳನ್ನು ಅಳವಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಐಜೂರು ವೃತ್ತದಲ್ಲಿ 25 ಅಡಿ ಎತ್ತರದ ಕಟೌಟ್ ಸ್ಥಾಪಿಸಲಾಗಿದ್ದು, ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಕೊಂಡಾಡುವ ಸಂದೇಶಗಳನ್ನು ಪ್ರದರ್ಶಿಸಲಾಗಿದೆ. ಪಕ್ಷದ ನಿಷ್ಠೆಗೆ ದೊರೆತ ಗೌರವ ಎಂದು ಉಲ್ಲೇಖಿಸಿ ಕಾರ್ಯಕರ್ತರು ಶುಭಾಶಯ ಕೋರಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಕನಕಪುರದಲ್ಲಿ ಅಧಿಕೃತ ಘೋಷಣೆ ಹೊರಬೀಳುವವರೆಗೂ ಯಾವುದೇ ಬ್ಯಾನರ್ ಅಥವಾ ಬಂಟಿಂಗ್ಸ್ ಅಳವಡಿಸದಂತೆ ಡಿ.ಕೆ. ಬ್ರದರ್ಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಮನಗರದಲ್ಲಿ ಸಂಭ್ರಮದ ವಾತಾವರಣ ಕಂಡುಬಂದರೆ, ಕನಕಪುರದಲ್ಲಿ ಕಾರ್ಯಕರ್ತರು ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.



