ರಾಮನಗರ, ಜುಲೈ 02: ಕಾವೇರಿ ಕ್ರಷರ್‌ನಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತ ದುರಂತ ಏಳು ಕಾರ್ಮಿಕರ ಜೀವ ಕಸಿದುಕೊಂಡಿದ್ದರೆ, ಮತ್ತೊಂದು ಕಳವಳಕಾರಿ ಬೆಳವಣಿಗೆಯಲ್ಲಿ ಗಂಭೀರವಾಗಿ ಗಾಯಗೊಂಡ ಐವರು ಕಾರ್ಮಿಕರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ತಕ್ಷಣವೇ ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಂಡೆ ಕುಸಿತದ ಭಾರೀ ಹೊಡೆತಕ್ಕೆ ಕೈ, ಕಾಲು, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವದಿಂದ ಕೆಲವರು ಪ್ರಜ್ಞೆ ಕಳೆದುಕೊಂಡಿದ್ದಾರೆ.
ವೈದ್ಯರ ತಂಡ ನಿರಂತರ ಚಿಕಿತ್ಸೆ ನೀಡುತ್ತಿದ್ದು, ಗಾಯಾಳುಗಳ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಈ ದುರಂತದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿಯೂ ವ್ಯಕ್ತವಾಗಿದ್ದು, ಆಸ್ಪತ್ರೆಯಲ್ಲಿ ಕಟ್ಟೆಚ್ಚರದ ವೈದ್ಯಕೀಯ ನಿಗಾ ಮುಂದುವರಿದಿದೆ.



