ಕೊಪ್ಪಳ: ನಗರದ ಅಶೋಕ್ ಸರ್ಕಲ್ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ₹1,67,330 ನಗದು ಹಣವನ್ನು ಇಬ್ಬರು ಯುವಕರು ಪ್ರಾಮಾಣಿಕವಾಗಿ ಪೊಲೀಸ್ ಠಾಣೆಗೆ ಒಪ್ಪಿಸಿ ಮಾದರಿಯಾಗಿದ್ದಾರೆ.
ಬೀರಪ್ಪ ತಂದೆ ಮರಿಯಪ್ಪ ಅವರು ಬೈಕ್ನಲ್ಲಿ ತೆರಳುವಾಗ ಹಣವಿದ್ದ ಬ್ಯಾಗ್ ದಾರಿಯಲ್ಲಿ ಬಿದ್ದಿತ್ತು. ಇದೇ ವೇಳೆ ಜಾಕೀರ್ ತಂದೆ ಅಬ್ದುಲ್ ಶುಕೂರ್ ಸಾಬ್ ಹಾಗೂ ಇಂದ್ರೇಶ್ ತಂದೆ ರಾಮಪ್ಪ ಕೊಳ್ಳಿ ದನಕಾದೊಡ್ಡಿ ಅವರಿಗೆ ಬ್ಯಾಗ್ ಸಿಕ್ಕಿದೆ.

ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ₹1,67,330 ನಗದು ಇರುವುದನ್ನು ಕಂಡ ಇಬ್ಬರು, ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳದೆ ತಕ್ಷಣವೇ ಕೊಪ್ಪಳ ನಗರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಒಪ್ಪಿಸಿದರು.
ನಂತರ ಪೊಲೀಸರು ಹಣ ಕಳೆದುಕೊಂಡಿದ್ದ ಬೀರಪ್ಪ ಅವರಿಗೆ ನಗದು ಹಣವನ್ನು ಹಸ್ತಾಂತರಿಸಿದರು. ಸಂಕಷ್ಟದ ಕಾಲದಲ್ಲಿ ಪ್ರಾಮಾಣಿಕತೆ ಮೆರೆದ ಜಾಕೀರ್ ಹಾಗೂ ಇಂದ್ರೇಶ್ ಅವರ ಕಾರ್ಯವನ್ನು ಸಾರ್ವಜನಿಕರು ಹಾಗೂ ಪೊಲೀಸರು ಶ್ಲಾಘಿಸಿದ್ದಾರೆ.



