ಹಾಸನ: ನಟ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರ ಆಸ್ತಿ ಧ್ವಂಸ ಪ್ರಕರಣದಲ್ಲಿ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಂಡಿದ್ದರೂ, ಎಸ್‌ಪಿ ಭೇಟಿಯ ಪ್ರಯತ್ನ ಮಾತ್ರ ಫಲಕಾರಿಯಾಗಲಿಲ್ಲ. ಕೋರ್ಟ್ ಸೂಚನೆಯಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರನ್ನು ಭೇಟಿ ಮಾಡಲು ಬಂದಿದ್ದ ಪುಷ್ಪಾ ಅರುಣ್‌ಕುಮಾರ್, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಚೇರಿಯಲ್ಲಿ ಕಾಯ್ದ ಬಳಿಕ ಭೇಟಿಯಾಗದೇ ವಾಪಸ್ಸಾದರು.
ಎಸ್‌ಪಿ ಶುಭನ್ವಿತಾ ಅವರು ಸಕಲೇಶಪುರಕ್ಕೆ ತೆರಳಿದ್ದರಿಂದ ಭೇಟಿ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿದ್ಯಾನಗರದಲ್ಲಿರುವ ತಮ್ಮ ಶೆಡ್ ಹಾಗೂ ಕಾಂಪೌಂಡ್ ಧ್ವಂಸಗೊಂಡು ಸುಮಾರು 24 ಲಕ್ಷ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ಪುಷ್ಪಾ ಅರುಣ್‌ಕುಮಾರ್ ಆರೋಪಿಸಿದ್ದಾರೆ. ದೇವರಾಜ್, ಧರ್ಮ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸದೆ ಎನ್‌ಸಿಆರ್ ದಾಖಲಿಸಿದ್ದಾರೆ ಎಂಬುದು ಕುಟುಂಬದ ಆರೋಪವಾಗಿದೆ.
ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿ ಸಂಬಂಧಿ ದುರ್ಗಾಪ್ರಸಾದ್ ಡಿಜಿಟಲ್ ಸಾಕ್ಷ್ಯಗಳೊಂದಿಗೆ ಹಾಸನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಸ್‌ಪಿ ಭೇಟಿಗೆ ಬಂದಿದ್ದರೂ, ಅಧಿಕಾರಿಯ ಅನುಪಸ್ಥಿತಿಯಿಂದ ಭೇಟಿ ಸಾಧ್ಯವಾಗದೇ ಹೋಗಿರುವುದು ಇದೀಗ ಪ್ರಕರಣಕ್ಕೆ ಮತ್ತೊಂದು ಕುತೂಹಲಕಾರಿ ತಿರುವು ನೀಡಿದೆ.



