ಕಲಬುರಗಿ: ರಾಜ್ಯದ ನೂತನ ಸರ್ಕಾರದ ರಚನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹುದ್ದೆಗಳು ಹಾಗೂ ಸಚಿವ ಸಂಪುಟದ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆಗಳ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕ ಎಷ್ಟು ಉಪ ಮುಖ್ಯಮಂತ್ರಿಗಳು ಇರಬೇಕು ಹಾಗೂ ಎಷ್ಟು ಮಂದಿಯನ್ನು ಸಚಿವರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಚಿವ ಸಂಪುಟ ರಚನೆ ಹಂತ ಹಂತವಾಗಿ ನಡೆಯಲಿದೆ ಎಂದು ತಿಳಿಸಿದ ಖರ್ಗೆ, ಮೊದಲ ಹಂತದಲ್ಲಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆ. ಬಳಿಕ ಸುಮಾರು 15 ದಿನಗಳ ನಂತರ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು.
ಮೊದಲ ಹಂತದಲ್ಲಿ 8ರಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅವರಿಂದ ಸಚಿವರ ಪಟ್ಟಿಯು ಬಂದ ನಂತರ ಎಷ್ಟು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜೂನ್ 3ರಂದು ನಡೆಯಲಿರುವ ಸಭೆಯಲ್ಲಿ ಸಚಿವ ಸಂಪುಟ ರಚನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಖರ್ಗೆ ಹೇಳಿದರು.



