ವಿಜಯಸಾಕ್ಷಿ ಸುದ್ದಿ, ಗದಗ: “ಮನಸ್ಸು ಒಂದು ಕ್ಯಾನ್ವಾಸ್ ಇದ್ದಂತೆ. ಅದರ ಮೇಲೆ ಭಾವನೆಗಳೆಂಬ ಬಣ್ಣಗಳಿಂದ ಚಿತ್ರ ಮೂಡಿಸಿದಾಗ ಜೀವನ ಸುಂದರವಾಗುತ್ತದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಹೇಳಿದರು.
ನಗರದ ಬಣ್ಣದಮನೆ ಆರ್ಟ್ ಅಡ್ಡಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಧನಸಹಾಯದೊಂದಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಚಿತ್ರಕಲಾವಿದೆ ಸಂಗೀತಾ ಕೆ. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಂಗೀತಾ ಅವರ ಕಲಾಕೃತಿಗಳು ಮನಸ್ಸಿನ ಭಾವನೆಗಳನ್ನು ಸಹಜವಾಗಿ ಮತ್ತು ಅದ್ಭುತವಾಗಿ ಅಭಿವ್ಯಕ್ತಿಸಿವೆ. ಚಿತ್ರಕಲೆ ಸೇರಿದಂತೆ ಎಲ್ಲ ಕಲೆಗಳು ಮನುಷ್ಯನಿಗೆ ಆತ್ಮಸಂತೃಪ್ತಿ ನೀಡುವುದರ ಜೊತೆಗೆ ನಮ್ಮ ನಾಡಿನ ಹೆಮ್ಮೆಯ ಪ್ರತೀಕಗಳಾಗಿವೆ” ಎಂದು ಹೇಳಿದರು.
“ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವೈಯಕ್ತಿಕವಾಗಿಯೂ ಸಹಕಾರ ನೀಡಲು ಸದಾ ಸಿದ್ಧ” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಮಾತನಾಡಿ, “ಕಲೆ ಎಲ್ಲರಲ್ಲೂ ಅಡಗಿರುತ್ತದೆ. ಆದರೆ ಅದನ್ನು ಅಭ್ಯಾಸ ಮತ್ತು ಪರಿಶ್ರಮದಿಂದ ಬೆಳೆಸಿಕೊಂಡವರು ಮಾತ್ರ ಶ್ರೇಷ್ಠ ಕಲಾವಿದರಾಗುತ್ತಾರೆ” ಎಂದರು.
“ರಾಜ್ಯದ ಅನೇಕ ಚಿತ್ರಕಲಾವಿದರು ಮತ್ತು ಕಲಾಶಿಕ್ಷಕರು ತಮ್ಮ ಅದ್ಭುತ ಕೃತಿಗಳ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ” ಎಂದು ಹೇಳಿದರು.
ಸಾಹಿತಿ ಮರಳುಸಿದ್ದಪ್ಪ ದೊಡ್ಡಮನಿ ಮಾತನಾಡಿ, “ಕಲೆ ಮತ್ತು ಕವಿತೆ ಎರಡೂ ಭಾವನೆಗಳ ಅಭಿವ್ಯಕ್ತಿ. ಒಂದು ಅಕ್ಷರಗಳ ಮೂಲಕ ಮಾತನಾಡಿದರೆ, ಇನ್ನೊಂದು ಬಣ್ಣ ಮತ್ತು ರೇಖೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತದೆ” ಎಂದರು.
ಬಳ್ಳಾರಿಯ ರಾಜ್ಯಮಟ್ಟದ ಕಲಾವಿದ ಹಾಗೂ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ವಿಕ್ರಂ ನಿಹಾಲ್ ರಾಜು ಮಾತನಾಡಿ, “ಚಿತ್ರವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಅದನ್ನು ಓದಲು ಕಲಿಯಬೇಕು. ಸಂಗೀತಾ ಅವರ ಚಿತ್ರಗಳಲ್ಲಿ ಸೂಕ್ಷ್ಮ ಸಂವೇದನೆ ಹಾಗೂ ಅಮೂರ್ತ ಸೌಂದರ್ಯ ಅಡಗಿದೆ” ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ ಮಾತನಾಡಿ, “ಕಲೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜನಜೀವನವನ್ನು ಪ್ರತಿಬಿಂಬಿಸುತ್ತದೆ. ಕಲೆಯ ಮೂಲಕವೇ ಇತಿಹಾಸ ಮತ್ತು ಕಾಲಘಟ್ಟವನ್ನು ಅರ್ಥಮಾಡಿಕೊಳ್ಳಬಹುದು” ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಕುಮಾರ ಭಜಂತ್ರಿ ಮಾತನಾಡಿ, “ಬಣ್ಣದಮನೆ ಆರ್ಟ್ ಅಡ್ಡಾ ಕಲಾಪ್ರಿಯರಿಗೆ ಉತ್ತಮ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯ ಮತ್ತು ಲಲಿತಕಲೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು” ಎಂದು ತಿಳಿಸಿದರು.
ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, “ಸಂಗೀತಾ ಅವರ ಚಿತ್ರಪ್ರದರ್ಶನ ಇತರೆ ಕಲಾವಿದರಿಗೂ ಮಾದರಿಯಾಗಿದೆ. ಇಂತಹ ಪ್ರತಿಭೆಗಳನ್ನು ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಈ ಸಂದರ್ಭದಲ್ಲಿ ಕಲಾವಿದೆ ಸಂಗೀತಾ ಕೆ. ಅವರನ್ನು ಬಣ್ಣದಮನೆ ವತಿಯಿಂದ ಸನ್ಮಾನಿಸಲಾಯಿತು.
ಭಾರತಿ ಕಿರೇಸೂರ ಪ್ರಾರ್ಥಿಸಿದರು. ಬಸವರಾಜ ಈರಣ್ಣವರ ಕಾರ್ಯಕ್ರಮ ನಿರೂಪಿಸಿದರು. ಬಿ.ಎನ್. ಬೇಂದ್ರೆ ವಂದಿಸಿದರು.
ಕಾರ್ಯಕ್ರಮದಲ್ಲಿ ರಮೇಶ ಮುರುಗೋಡ, ಸರೋಜಾ ಮುಂಡೇವಾಡಿ, ಮಹೇಶ್ ಶಟವಾಜಿ, ನದಾಫ್ ಹಾಗೂ ಮಡಿವಾಳ ಉಪಸ್ಥಿತರಿದ್ದರು.
“ಚಿತ್ರಗಳು ಕೇವಲ ಬಣ್ಣಗಳ ಸಂಯೋಜನೆ ಅಲ್ಲ; ಅವು ಮನಸ್ಸಿನ ಮಾತುಗಳನ್ನು ಮೌನವಾಗಿ ಹೇಳುವ ಕಲಾತ್ಮಕ ಭಾಷೆ.”ಡಾ. ಬಸವರಾಜ ಬಳ್ಳಾರಿಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ



