ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ವಾಣಿಜ್ಯ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಫೆಡರಲ್ ಅಧಿಕಾರಿಗಳು ಬಂಧಿಸಿದ್ದು, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ (CBP) ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅಧಿಕಾರಿಗಳು, ಮೇ 11ರಿಂದ 15ರವರೆಗೆ ಅರಿಜೋನಾದ ಯುಮಾ ಗಡಿ ವಲಯದಲ್ಲಿ ನಡೆಸಲಾದ ‘ಆಪರೇಷನ್ ಚೆಕ್ಮೇಟ್’ ಕಾರ್ಯಾಚರಣೆಯ ವೇಳೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರ ಪೈಕಿ 36 ಮಂದಿ ವಾಣಿಜ್ಯ ಸೆಮಿ-ಟ್ರಕ್ಗಳನ್ನು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.
ಈ 36 ಟ್ರಕ್ ಚಾಲಕರಲ್ಲಿ 30 ಮಂದಿ ಭಾರತೀಯ ಮೂಲದವರಾಗಿದ್ದು, ಉಳಿದವರು ಮೆಕ್ಸಿಕೊ, ಎಲ್ ಸಾಲ್ವಡಾರ್ ಮತ್ತು ರಷ್ಯಾ ದೇಶಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಕೆಲವರು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ವಾಷಿಂಗ್ಟನ್ ಹಾಗೂ ವರ್ಜೀನಿಯಾ ರಾಜ್ಯಗಳಲ್ಲಿ ನೀಡಲಾದ ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿದ್ದರೆ, ಕೆಲವರ ಬಳಿ ಯಾವುದೇ ಮಾನ್ಯ ಚಾಲನಾ ಪರವಾನಗಿಯೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಪೈಕಿ ಹಲವರು ಹಿಂದಿನ ಆಡಳಿತದ ಅವಧಿಯಲ್ಲಿ ಪಡೆದಿದ್ದ ಉದ್ಯೋಗ ದೃಢೀಕರಣ ದಾಖಲೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಉಳಿದುಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ದಾಖಲೆಗಳ ಮಾನ್ಯತೆ ಈಗ ಮುಕ್ತಾಯಗೊಂಡಿರುವುದಾಗಿ ತಿಳಿಸಲಾಗಿದೆ.
ಫೆಡರಲ್ ಕಾನೂನುಗಳ ಪ್ರಕಾರ ಎಲ್ಲ ಬಂಧಿತರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
‘ಆಪರೇಷನ್ ಚೆಕ್ಮೇಟ್’ ಕಾರ್ಯಾಚರಣೆಯ ಉದ್ದೇಶ ಅಮೆರಿಕದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ವಾಹನಗಳನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವ ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಮಾ ಗಡಿ ವಲಯದ ಹಂಗಾಮಿ ಮುಖ್ಯ ಗಡಿ ಗಸ್ತು ಅಧಿಕಾರಿ ಡಸ್ಟಿನ್ ಕೌಡ್ಲ್ ಪ್ರತಿಕ್ರಿಯಿಸಿ, “ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಅಕ್ರಮ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆ. ಸಮುದಾಯಗಳ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟಲು ನಮ್ಮ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ವಾಣಿಜ್ಯ ಟ್ರಕ್ ಹಾಗೂ ಬಸ್ಗಳನ್ನು ಚಾಲನೆ ಮಾಡಲು ಅರ್ಹತೆ ಇಲ್ಲದ ವಿದೇಶಿ ನಾಗರಿಕರಿಗೆ ಪರವಾನಗಿ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.



