ರಾಯಚೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪಂಚಮುಖಿ ಆಂಜನೇಯ ದೇವಸ್ಥಾನ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ದೇವಾಲಯದ ಹಿಂದಿನ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಬಂದಿವೆ.
ಈ ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದಿರುವ ಘಟನೆಗಳು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸುತ್ತಿವೆ. ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಯಡಿಯೂರಪ್ಪ ಅವರು ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳಾದ ಉದಾಹರಣೆಗಳನ್ನು ದೇವಾಲಯದ ಮೂಲ ಅರ್ಚಕರು ಉಲ್ಲೇಖಿಸುತ್ತಿದ್ದಾರೆ.
ಇದೇ ರೀತಿಯಲ್ಲಿ 2025ರ ಅಕ್ಟೋಬರ್‌ನಲ್ಲಿ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ವಿಶೇಷ ಪೂಜೆ ನೆರವೇರಿಸಿದ್ದರು. ಆ ವೇಳೆಲೇ ಅವರ ಭವಿಷ್ಯ ಕುರಿತು ದೇವಾಲಯದ ಅರ್ಚಕರು ನೀಡಿದ್ದ ಹೇಳಿಕೆಗಳು ಈಗ ಮತ್ತೆ ಸದ್ದು ಮಾಡುತ್ತಿವೆ.
“ಪಂಚಮುಖಿ ಪ್ರಾಣದೇವರ ಆಶೀರ್ವಾದದಿಂದಲೇ ಇಷ್ಟಾರ್ಥಗಳು ಈಡೇರುತ್ತವೆ” ಎಂದು ಹೇಳಿದ್ದ ಅರ್ಚಕರು, ಇದೀಗ ಡಿಕೆಶಿ ಸಿಎಂ ಆಗಿರುವುದನ್ನು ದೈವ ಸಂಕೇತವಾಗಿ ನೋಡುತ್ತಿದ್ದಾರೆ. ದೇವಸ್ಥಾನದಲ್ಲಿ ಭಕ್ತರು ಸಂಭ್ರಮಾಚರಣೆ ನಡೆಸುತ್ತಿದ್ದು, ವಿಶೇಷ ಪೂಜೆಗಳು ಮುಂದುವರಿದಿವೆ.



