ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹಾಲಮತ ಸಮಾಜದ ವತಿಯಿಂದ ಸೋಮವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಲಮತ ಸಮಾಜದ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಸೋಮಣ್ಣ ಬೆಟಗೇರಿ, “ಉತ್ತರ ಕರ್ನಾಟಕ ಭಾಗದ ರೈತರು, ಬಡವರು ಹಾಗೂ ಅಹಿಂದ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವ ಸಚಿವರ ಅಗತ್ಯವಿದೆ. ಆ ನಿಟ್ಟಿನಲ್ಲಿ ಬಸವರಾಜ ಶಿವಣ್ಣನವರ ಅವರು ಸೂಕ್ತ ಅಭ್ಯರ್ಥಿಯಾಗಿದ್ದಾರೆ” ಎಂದು ಹೇಳಿದರು.
ನಾಲ್ಕು ಬಾರಿ ಶಾಸಕರಾಗಿ ಅಪಾರ ಜನಪ್ರಿಯತೆ ಗಳಿಸಿರುವ ಅವರು ಪಕ್ಷ ಹಾಗೂ ಸರ್ಕಾರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರೊಂದಿಗೆ ಆತ್ಮೀಯವಾಗಿ ಬೆರೆಯುವ ನಾಯಕರಾಗಿರುವ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುವುದರ ಜೊತೆಗೆ ಅಹಿಂದ ವರ್ಗ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಶಿವಣ್ಣನವರ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಪಕ್ಷಕ್ಕೂ ಲಾಭವಾಗಲಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಲಿದೆ ಎಂದು ಹೇಳಿದರು.
ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾವಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದ ಜನರ ಆಶಯ ಈಡೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಹುಲ್ ಹೊಳಲಾಪುರ, ಮುದಕಣ್ಣ ಗದ್ದಿ, ಛಾಯಪ್ಪ ಬಸಾಪುರ, ಮುತ್ತಣ್ಣ ಟೋಕಾಳಿ, ಮಂಜುನಾಥ ಶೇರಸೂರಿ, ಸುರೇಶ ಹೊಳಲಾಪುರ, ಮಲ್ಲೇಶಪ್ಪ ಬಸಾಪುರ ಹಾಗೂ ಪುಟ್ಟಪ್ಪ ಬಳಗಾನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



